
ಬೆಳ್ತಂಗಡಿ: ಸಾಮಾಜಿಕ ಸೇವೆ, ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜದ ಬಡ ಮತ್ತು ಹಿಂದುಳಿದ ವರ್ಗಗಳ ಉನ್ನತಿಗಾಗಿ ಹಲವು ದಶಕಗಳಿಂದ ಶ್ರಮಿಸುತ್ತಿರುವ ಮಾಲಾಡಿಯ ಹಿರಿಯ ಸಮಾಜ ಸೇವಕ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಪ್ರತಿಷ್ಠಿತ ‘ಭಾರತ ಪಂಚರತ್ನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಸುವರ್ಣ ಕರ್ನಾಟಕ ಕಾರ್ಮಿಕ ವೇದಿಕೆಯ ವತಿಯಿಂದ ನ.22 ರಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಆಯೋಜಿಸಲಾಗುತ್ತಿರುವ ಪ್ರಶಸ್ತಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡಲಾಗುವುದು.
ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಮಹತ್ವದ ಕೊಡುಗೆ, ಸಾಮಾಜಿಕ ಕಳಕಳಿ ಹಾಗೂ ಬಡ ಮತ್ತು ಹಿಂದುಳಿದ ಜನರ ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಗಾಗಿ ವಿವಿಧ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಮೂಲಕ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರು ಜಮೀಯತುಲ್ ಫಲಾಹ್ ಬೆಳ್ತಂಗಡಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದು, ಪ್ರಸ್ತುತ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುಂಜಾಲಕಟ್ಟೆ ಸರಕಾರಿ ಪದವಿಪೂರ್ವ ಕಾಲೇಜು, ಮಾಲಾಡಿ ಮತ್ತು ಸೋನಂದೂರು ಸರಕಾರಿ ಶಾಲೆಗಳ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ. ಮಾಲಾಡಿ ಸರಕಾರಿ ಐಟಿಐ ಕಾಲೇಜಿನ ಅಭಿವೃದ್ಧಿಯಲ್ಲಿಯೂ ಮಹತ್ವದ ಕೊಡುಗೆ ನೀಡಿದ್ದಾರೆ.
ಇದಲ್ಲದೆ, ಮಾಲಾಡಿ ಕೊಲ್ಪೆದಬೈಲ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಹಾಗೂ ಮಡಂತ್ಯಾರು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಲಯನ್ಸ್ ಕ್ಲಬ್‌ನ ವಲಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು,
ರಾಜಕೀಯ ಕ್ಷೇತ್ರದಲ್ಲಿಯೂ ಹಿಂದೆ ಸಕ್ರಿಯರಾಗಿದ್ದರು. ಜನತಾದಳ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.ಒಂದು ಅವಧಿಗೆ ಜನತಾದಳದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಮಾಜಿ ಶಾಸಕ ದಿವಂಗತ ವಸಂತ ಬಂಗೇರ ಅವರ ಆಪ್ತ ಹಾಗೂ ನಿಷ್ಠಾವಂತ ಸಹಚರರಾಗಿ ಗುರುತಿಸಿಕೊಂಡಿದ್ದರು.
ಶಿಕ್ಷಣದ ಮೂಲಕ ಸಮಾಜದ ಹಿಂದುಳಿದ ವರ್ಗಗಳ ಏಳಿಗೆ, ಸಂಘಟನೆಗಳ ಬಲವರ್ಧನೆ ಮತ್ತು ಜನಸೇವೆಯನ್ನೇ ತಮ್ಮ ಜೀವನದ ಪ್ರಮುಖ ಧ್ಯೇಯವನ್ನಾಗಿಸಿಕೊಂಡಿರುವ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಸಂದಿರುವ ಈ ಗೌರವವು ಅವರ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.