Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಬಿಷಪ್ ಜೇಮ್ಸ್ ಪಟ್ಟೇರಿಲರ ಧರ್ಮಾಧ್ಯಕ್ಷ ದೀಕ್ಷೆಯ ಪ್ರಥಮ ವಾರ್ಷಿಕೋತ್ಸವ: ಮೌಲ್ಯಾಧಾರಿತ ಕುಟುಂಬಗಳ ಮತ್ತು ಬಡವರ...

ಬೆಳ್ತಂಗಡಿ ಬಿಷಪ್ ಜೇಮ್ಸ್ ಪಟ್ಟೇರಿಲರ ಧರ್ಮಾಧ್ಯಕ್ಷ ದೀಕ್ಷೆಯ ಪ್ರಥಮ ವಾರ್ಷಿಕೋತ್ಸವ: ಮೌಲ್ಯಾಧಾರಿತ ಕುಟುಂಬಗಳ ಮತ್ತು ಬಡವರ ಸೇವೆಗೆ ಆದ್ಯತೆ

0

ಬೆಳ್ತಂಗಡಿ: ಬೆಳ್ತಂಗಡಿ ಧರ್ಮಪ್ರಾಂತ್ಯದ ಬಿಷಪ್ ಮಾರ್ ಜೇಮ್ಸ್ ಪಟ್ಟೇರಿಲ್ ಅವರು ತಮ್ಮ ಮೊದಲ ವರ್ಷದ ಸೇವೆಯ ವಾರ್ಷಿಕೋತ್ಸವವನ್ನು ಸೈನ್ಟ್ ಲಾರೆನ್ಸ್ ಕಥೀಡ್ರಲ್ ಚರ್ಚ್ ನಲ್ಲಿ ಧರ್ಮಗುರುಗಳ, ಧರ್ಮಭಗಿನಿಯರ ಮತ್ತು ಕ್ರೈಸ್ತ ಬಂದವರೊಂದಿಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಅವರು ನೀಡಿದ ಸಂದೇಶದಲ್ಲಿ ಕುಟುಂಬಗಳ ಬಲವರ್ಧನೆ, ದೇವರ ಸೇವೆ ಮತ್ತು ಬಡವರಿಗೆ ಮನೆ ನಿರ್ಮಿಸಿಕೊಡುವ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡಿದ್ದಾರೆ. ಧರ್ಮಪ್ರಾಂತ್ಯದ ಭವಿಷ್ಯದ ಬೆಳವಣಿಗೆಗಾಗಿ ಮುಂದಿನ ಐದು ವರ್ಷಗಳ ಅಭಿವೃದ್ಧಿ ಯೋಜನೆಯನ್ನೂ ರೂಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಧರ್ಮಪ್ರಾಂತ್ಯದ ವಿವಿಧ ಇಗರ್ಜಿಗಳಿಗೆ ಭೇಟಿ ನೀಡಿ ಗುರುಗಳು, ಧಾರ್ಮಿಕ ಜೀವನಕ್ಕೆ ಸಮರ್ಪಿಸಿಕೊಂಡವರು, ಕುಟುಂಬಗಳು ಮತ್ತು ವಿಶ್ವಾಸಿಗಳೊಂದಿಗೆ ಸಂವಾದ ನಡೆಸಿದ ಅನುಭವಗಳನ್ನು ಬಿಷಪ್ ಸಂದೇಶದಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪ್ರಾರ್ಥನೆ, ಸಹಕಾರ ಮತ್ತು ಪ್ರೀತಿಯಿಂದ ಬೆಂಬಲಿಸಿದ ಧರ್ಮಪ್ರಾಂತ್ಯದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಧರ್ಮಪ್ರಾಂತ್ಯವನ್ನು ಆರಂಭದಿಂದ ಕಟ್ಟಿಬೆಳೆಸಿದ ಮೊದಲ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ಅವರನ್ನು ಗೌರವದಿಂದ ಸ್ಮರಿಸಿರುವ ಅವರು, ಇತ್ತೀಚೆಗೆ ನಿಧನರಾದ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆವ. ಡಾ. ಮಾಣಿ ವೆಳುತ್ತೇತ್ತುಪರಂಬಿಲ್ ಅವರ ಸೇವೆಯನ್ನು ನೆನಪಿಸಿಕೊಂಡು ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದ್ದಾರೆ.

ಮೌಲ್ಯಾಧಾರಿತ ಕುಟುಂಬಗಳ ಬಲವರ್ಧನೆಗೆ ಒತ್ತು
ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಷಪ್, ಮಕ್ಕಳು ದೇವರ ಕೊಡುಗೆ ಎಂಬ ಮನೋಭಾವದೊಂದಿಗೆ ಕುಟುಂಬಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಧರ್ಮಪ್ರಾಂತ್ಯದಲ್ಲಿ ನಾಲ್ಕನೇ ಮಗುವಿಗೆ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವ ಯೋಜನೆ ಜಾರಿಯಲ್ಲಿದೆ. ಅಲ್ಲದೆ, ನಾಲ್ಕನೇ ಮಗುವಿನ ದೀಕ್ಷಾಸ್ನಾನದ ಸಂದರ್ಭದಲ್ಲಿ ತಾವೇ ಧರ್ಮಪಿತೃಯಾಗಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.
ಮಕ್ಕಳನ್ನು ಬೆಳೆಸುವಲ್ಲಿ ಕುಟುಂಬಗಳಿಗೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವ ಸಮುದಾಯವನ್ನು ನಿರ್ಮಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಬಡ ಕುಟುಂಬಗಳಿಗೆ ಮನೆ ನಿರ್ಮಾಣ
ಸ್ವಂತ ಮನೆಯಿಲ್ಲದೆ ಬದುಕುತ್ತಿರುವ ಕುಟುಂಬಗಳ ಪರಿಸ್ಥಿತಿ ತಮ್ಮನ್ನು ಆಳವಾಗಿ ಕಾಡಿದೆ ಎಂದು ಬಿಷಪ್ ತಿಳಿಸಿದ್ದಾರೆ. ಜುಬಿಲಿ ವರ್ಷದ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ವತಿಯಿಂದ ಹಲವು ಮನೆಗಳನ್ನು ನಿರ್ಮಿಸಿ ಅರ್ಹ ಕುಟುಂಬಗಳಿಗೆ ಹಸ್ತಾಂತರಿಸಿರುವುದು ದೇವರ ಅನುಗ್ರಹ ಎಂದು ಅವರು ಹೇಳಿದ್ದಾರೆ.
ಈ ಸೇವಾಕಾರ್ಯವನ್ನು ಮುಂದುವರಿಸಲು ಗುರುಗಳ ನೇತೃತ್ವದಲ್ಲಿ ವಿಶ್ವಾಸಿಗಳ ಸಮುದಾಯ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದ್ದಾರೆ.

ಸಮೃದ್ಧ ಜೀವನದ ಧ್ಯೇಯ
‘ಅವರಿಗೆ ಜೀವವುಂಟಾಗಲು, ಅದು ಸಮೃದ್ಧವಾಗಿ ಉಂಟಾಗಲು ನಾನು ಬಂದಿದ್ದೇನೆ’ ಎಂಬ ಯೇಸು ಕ್ರಿಸ್ತನ ವಾಕ್ಯವನ್ನು ತಮ್ಮ ಧ್ಯೇಯವಾಕ್ಯವನ್ನಾಗಿ ಸ್ವೀಕರಿಸಿರುವ ಬಿಷಪ್, ಕುಟುಂಬಗಳು, ಗುರುಗಳು, ಧಾರ್ಮಿಕ ಜೀವನಕ್ಕೆ ಸಮರ್ಪಿಸಿಕೊಂಡವರು ಹಾಗೂ ವಿಶ್ವಾಸಿಗಳ ಆಧ್ಯಾತ್ಮಿಕ ಬೆಳವಣಿಗೆಗೆ ಆದ್ಯತೆ ನೀಡಿದ್ದಾರೆ.
ಧರ್ಮಪ್ರಾಂತ್ಯದ ಬಹುಪಾಲು ಜನರು ಕೃಷಿಕರಾಗಿರುವ ಹಿನ್ನೆಲೆಯಲ್ಲಿ ಅವರ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಸ್ಪಂದಿಸುವ ಅಗತ್ಯವನ್ನೂ ಅವರು ಸ್ಮರಿಸಿದ್ದಾರೆ. ಹಿಂದಿನ ತಲೆಮಾರುಗಳು ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ನೈತಿಕತೆ ಹಾಗು ವಿಶ್ವಾಸವನ್ನು ಉಳಿಸಿಕೊಂಡ ಮಾದರಿಯನ್ನು ಇಂದಿನವರು ಅನುಸರಿಸಬೇಕು ಎಂದು ಕರೆ ನೀಡಿದ್ದಾರೆ.
ತಮ್ಮ ಮೊದಲ ವರ್ಷದ ಸೇವೆಯ ವಾರ್ಷಿಕೋತ್ಸವದ ಅಂಗವಾಗಿ 2026ರ ನವೆಂಬರ್ 5ರಂದು ಧರ್ಮಪ್ರಾಂತ್ಯದ ಎಲ್ಲಾ ದೇವಾಲಯಗಳು, ಸನ್ಯಾಸ ಭವನಗಳು ಮತ್ತು ಸಂಸ್ಥೆಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಯಿತು. ಒಟ್ಟಾಗಿ ಪ್ರಾರ್ಥಿಸಿ, ಒಟ್ಟಾಗಿ ಕೆಲಸ ಮಾಡಿ, ವಿಶ್ವಾಸದಲ್ಲಿ ಬೆಳೆಯುವ ಮೂಲಕ ಧರ್ಮಪ್ರಾಂತ್ಯವನ್ನು ಪ್ರೀತಿ ಮತ್ತು ಸೇವೆಯ ಸಮುದಾಯವನ್ನಾಗಿ ರೂಪಿಸೋಣ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version