

ಬೆಳ್ತಂಗಡಿ; ಬೆಳ್ತಂಗಡಿಯ ಕಾಶಿಬೆಟ್ಟು ಬಳಿಯಲ್ಲಿ ಕಾರ್ಯಾಚರಿಸುತ್ತಿರುವ ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಸಹಕಾರಿಯ 2ನೇ ಶಾಖೆಯು ಇಂದಬೆಟ್ಟುವಿನ ತೇಜಸ್ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್, ಹಿಂದೆ ಬ್ಯಾಂಕಿಂಗ್ ಕ್ಷೇತ್ರ ಕೇವಲ ಶ್ರೀಮಂತರಿಗೆ ಮಾತ್ರ ಸೀಮಿತವಾಗಿತ್ತು. ಬಡವರು ಬ್ಯಾಂಕಿನ ಬಾಗಿಲು ತುಳಿಯುವುದಕ್ಕೂ ಸಾಧ್ಯವಿರಲಿಲ್ಲ. ಆದರೆ ಸಹಕಾರಿ ಸಂಘಗಳ ಸ್ಥಾಪನೆಯಾದ ಬಳಿಕ ಬಡವರಿಗೂ ಆರ್ಥಿಕ ಅವಕಾಶಗಳು ಸಿಕ್ಕಿ, ಅವರ ಬದುಕು ಉತ್ತಮಗೊಳ್ಳಲು ಸಾಧ್ಯವಾಗಿದೆ. ಸಹಕಾರಿ ಬ್ಯಾಂಕುಗಳಿಂದ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಗ್ರಾಮೀಣ ಭಾಗದ ಆರ್ಥಿಕ ಶಕ್ತಿಗೆ ಇವು ಮಹತ್ವದ ಕೊಡುಗೆ ನೀಡುತ್ತಿವೆ. ಸ್ಥಾಪಕಾಧ್ಯಕ್ಷ ರಾಜೇಶ್ ಪುದುಶೇರಿ ಅವರ ಪ್ರಾಮಾಣಿಕತೆ ಮತ್ತು ಸವಾಲುಗಳನ್ನು ಎದುರಿಸುವ ಶಕ್ತಿ ಯುವಜನತೆಗೆ ಮಾದರಿಯಾಗಿದೆ ಎಂದರು.
ಬಂಗಾಡಿ ಅರಮನೆಯ ಯಶೋಧರ ಬಳ್ಳಾಲ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.
ಎಸ್ತ್ರ ಫೌಂಡೇಶನ್ ಚೇರ್ಮೆನ್ ಫಾ| ಶಾಜಿ ಮ್ಯಾಥ್ಯೂ ವೆಟ್ಟಂತಡತ್ತಿಲ್ ಆಶೀರ್ವಚನ ನೀಡಿ,, ಸಂಸ್ಥೆ ಪ್ರಾರಂಭವಾದ ಕೆಲವೇ ಸಮಯದಲ್ಲಿ 2ನೇ ಶಾಖೆ ತೆರೆದಿರುವುದು ಹೆಮ್ಮೆಯ ವಿಚಾರ. ಸಹಕಾರಿ ಸಂಸ್ಥೆಗಳ ಬೆಳವಣಿಗೆಗೆ ವೈಯಕ್ತಿಕ ಹಿತಾಸಕ್ತಿಗಿಂತ ಸಮಾಜದ ಹಿತಾಸಕ್ತಿ ಮುಖ್ಯ. ಪ್ರಾಮಾಣಿಕತೆ, ಪಾರದರ್ಶಕತೆ, ಆರ್ಥಿಕ ಶಿಸ್ತು ಮತ್ತು ಸಮಾನತೆಯ ತತ್ತ್ವಗಳನ್ನು ಅಳವಡಿಸಿಕೊಂಡು ಸಂಸ್ಥೆಯನ್ನು ಬೆಳೆಸಿದ ರಾಜೇಶ್ ಪುದುಶೇರಿ ಅವರ ಕಾರ್ಯ ಶ್ಲಾಘನೀಯ ಎಂದರು.
ಬೆದ್ರಬೆಟ್ಟು ಮರಿಯಾಂಬಿಕಾ ಚರ್ಚ್ನ ಫಾ| ಮ್ಯಾಥ್ಯೂ ಆಶೀರ್ವಚನ ನೀಡಿ, ಮೊದಲ ಶಾಖೆಯ ಉದ್ಘಾಟನೆಯ ಸಂದರ್ಭದಲ್ಲೂ ಮಳೆ ಬಂದು ಸಂಸ್ಥೆ ಯಶಸ್ಸು ಕಂಡಿತ್ತು. ಇಂದು 2ನೇ ಶಾಖೆಯ ಉದ್ಘಾಟನೆ ವೇಳೆಯೂ ಮಳೆ ಬಂದಿರುವುದು ಶುಭ ಸೂಚಕವಾಗಿದೆ ಎಂದು ಹಾರೈಸಿದರು.
ಸ್ಥಾಪಕಾಧ್ಯಕ್ಷ ರಾಜೇಶ್ ಪುದುಶೇರಿ ಅವರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಹನಾಶ್ರೀ ಫೌಂಡೇಷನ್ ಲೋಗೋ ಅನಾವರಣಗೊಳಿಸಲಾಯಿತು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬೆಳ್ತಂಗಡಿ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಭಾರತೀಯ ಆಹಾರ ನಿಗಮ ಸದಸ್ಯ ವೇಣು ಯಾದವ್, ಆರೋಗ್ಯ ಕ್ಲಿನಿಕ್ನ ಡಾ. ಪ್ರದೀಪ್, ಉಜಿರೆ ಕಾಲಭೈರವೇಶ್ವರ ಸೊಸೈಟಿ ಅಧ್ಯಕ್ಷ ರಂಜನ್ ಜಿ.ಗೌಡ, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ. ವಸಂತ್, ಸಹಕಾರಿ ಅಭಿವೃದ್ಧಿ ಅಧಿಕಾರಿ ನಂದನ್ ಬಿ.ಎನ್., ಹಿರಿಯ ಸಹಕಾರಿ ಧುರೀಣ ಲಕ್ಷ್ಮಣ ಗೌಡ ಇರ್ತಿಲಾಲ್ , ವೈದ್ಯೆ ವಾಣಿ ಸುಗುಣ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿತ್ಯಾ ಸ್ವಾಗತಿಸಿದರು.
ಸಂಘ ನಿರಂತರ ಉತ್ತಮ ಸಾಧನೆ ರಾಜೇಶ್ ಪುದುಶೇರಿ
ಜುಲೈ 23, 2023 ರಂದು 700 ಸದಸ್ಯರೊಂದಿಗೆ ಪ್ರಾರಂಭಗೊಂಡ ನಮ್ಮ ಸಂಘವು ಪ್ರಸ್ತುತ 1400ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. 1 ಕೋಟಿ ರೂ. ಠೇವಣಿ ಸಂಗ್ರಹ ಹಾಗೂ 7 ಲಕ್ಷ ರೂ. ಪಾಲು ಬಂಡವಾಳ ಹೊಂದುವ ಮೂಲಕ ಉತ್ತಮ ಪ್ರಗತಿ ಸಾಧಿಸಿದೆ. ಗ್ರಾಹಕರಿಗಾಗಿ ಲಾಕರ್ ಸೌಲಭ್ಯ, ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಆಕರ್ಷಕ ಠೇವಣಿ ಬಡ್ಡಿ ನೀಡಲಾಗುತ್ತಿದೆ. ಸಹನಾಶ್ರೀ ಫೌಂಡೇಶನ್ ಮೂಲಕ ವಿದ್ಯಾರ್ಥಿವೇತನ, ವೈದ್ಯಕೀಯ ನೆರವು, ಬಡವರಿಗೆ ಧನಸಹಾಯ ಮತ್ತು ಧಾರ್ಮಿಕ ಕಾರ್ಯಗಳಿಗೆ ನೆರವು ನೀಡಲಾಗುತ್ತಿದೆ.” ಎಂದು ರಾಜೇಶ್ ಪುದುಶೇರಿ ತಿಳಿಸಿದರು.










