Home ರಾಜಕೀಯ ಸಮಾಚಾರ ಬೆಳ್ತಂಗಡಿ: ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಒತ್ತಾಯಿಸಿ SDPI ಪ್ರತಿಭಟನೆ; ಗುಂಡಿಮಯ ರಸ್ತೆ; ಸರ್ಕಾರಕ್ಕೇನು ಕಣ್ಣಿಲ್ಲವೇ? ಶಾಸಕ...

ಬೆಳ್ತಂಗಡಿ: ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಒತ್ತಾಯಿಸಿ SDPI ಪ್ರತಿಭಟನೆ; ಗುಂಡಿಮಯ ರಸ್ತೆ; ಸರ್ಕಾರಕ್ಕೇನು ಕಣ್ಣಿಲ್ಲವೇ? ಶಾಸಕ ಹರೀಶ್ ಪೂಂಜಾ ವಿರುದ್ಧ ಅನ್ವರ್ ಸಾದತ್ ವಾಗ್ದಾಳಿ

5
0

ಬೆಳ್ತಂಗಡಿ, ನ.2: ಹಲವು ವರ್ಷಗಳಿಂದ ಹದಗೆಟ್ಟಿರುವ ಗುರುವಾಯನಕೆರೆ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯನ್ನು ಶೀಘ್ರ ಮರುಡಾಮರೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಸೋಮವಾರ ಕಲ್ಲೇರಿ ಜಂಕ್ಷನ್‌ನಲ್ಲಿ ಬೃಹತ್ ಸಾರ್ವಜನಿಕ ಪ್ರತಿಭಟನಾ ಧರಣಿ ನಡೆಯಿತು.

ಪ್ರತಿಭಟನೆಯಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಸ್ತೆ ದುಸ್ಥಿತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಬೆಳ್ತಂಗಡಿ ಕ್ಷೇತ್ರಾಧ್ಯಕ್ಷ ಅಕ್ಬರ್ ಬೆಳ್ತಂಗಡಿ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ  ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೊ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ  ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, ಗುರುವಾಯನಕೆರೆ–ಉಪ್ಪಿನಂಗಡಿ ರಸ್ತೆಯ ದುಸ್ಥಿತಿಯ ಕುರಿತು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕ ಹರೀಶ್ ಪೂಂಜಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಜಿಲ್ಲೆಯ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ರಸ್ತೆಯು ಹಲವು ವರ್ಷಗಳಿಂದ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಪ್ರತಿನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವುದು ಸರ್ಕಾರ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ಧರಣಿಯ ಆರಂಭದಲ್ಲಿ ಹದಗೆಟ್ಟ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ವಿನೂತನ ರೀತಿಯಲ್ಲಿ ಪ್ರತಿಭಟಿಸಲಾಯಿತು. ರಸ್ತೆಯಲ್ಲಿದ್ದ ಹೊಂಡಗಳಲ್ಲಿ ಬಾಳೆಗಿಡಗಳನ್ನು ನೆಡುವ ಮೂಲಕ ಹಾಗೂ ಮೀನು ಹಿಡಿಯುವ ಸನ್ನಿವೇಶವನ್ನು ಸೃಷ್ಟಿಸಿ, ಹೊಂಡಗಳಿಗೆ ಸುಣ್ಣ ಬಳಿದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿತನದ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸಭೆಯಲ್ಲಿ ರಸ್ತೆ ದುರಸ್ತಿಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಲಾಯಿತು. ಹನೀಫ್ ಟಿ.ಎಸ್. ಹಾಗೂ ಅಶ್ರಫ್ ಚಾರ್ಮಾಡಿ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಿತು.

ಸಭೆಯಲ್ಲಿ SDTU ಕರ್ನಾಟಕ ರಾಜ್ಯ ಕಾರ್ಯದರ್ಶಿ ಸಲೀಂ ಜಿ.ಕೆ., SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಇನಾಸ್ ರೋಡ್ರಿಗಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ ಹಾಗೂ ನವಾಝ್ ಕಟ್ಟೆ, ಶಾಕಿರ್ ಅಳಕೆಮಜಲ್, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಕೆ.ಎಸ್. ಅಬ್ದುಲ್ಲಾ ಮತ್ತು ಶುಕುರ್ ಕುಪ್ಪೆಟ್ಟಿ ಮಾತನಾಡಿದರು.

ರಸ್ತೆ ದುರಸ್ತಿಯ ಅಗತ್ಯತೆ ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸುವ ಉದ್ದೇಶದಿಂದ ಸಾರ್ವಜನಿಕರಿಂದ ಮನವಿ ಪತ್ರಗಳನ್ನು ಸಂಗ್ರಹಿಸುವ ಮೂಲಕ ಚಳವಳಿ ನಡೆಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ಆಗಮಿಸಿ ಹೋರಾಟಗಾರರಿಂದ ರಸ್ತೆ ದುರಸ್ತಿಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಸ್ವೀಕರಿಸಿದರು. ಬಳಿಕ ಪ್ರತಿಭಟನಾಕಾರರ ಅಹವಾಲುಗಳನ್ನು ಆಲಿಸಿದ ಅವರು, ರಸ್ತೆಯ ಸಮಸ್ಯೆಯ ಗಂಭೀರತೆಯನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹಾಗೂ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಸದಸ್ಯ ರಹ್ಮಾನ್ ನಾವೂರು, ಬೆಳ್ತಂಗಡಿ ಕ್ಷೇತ್ರ ಕೋಶಾಧಿಕಾರಿ ಸಾಲಿಹ್ ಮದ್ದಡ್ಕ, ಸಮಿತಿ ಸದಸ್ಯರಾದ ಮುಸ್ತಫಾ ಜಿ.ಕೆ, ಆಶ್ರಫ್ ಕಟ್ಟೆ, ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಜಾಯಿಂಟ್ ಕನ್ವೀನರ್ ತೌಸಿಫ್ ಕಕ್ಕಿಂಜೆ, ಕಣಿಯೂರು ಬ್ಲಾಕ್ ಅಧ್ಯಕ್ಷ ಆಸೀಫ್ ಬಂಗೇರಕಟ್ಟೆ, ಕಾರ್ಯದರ್ಶಿ ಲತೀಫ್ ಪುಂಜಾಲಕಟ್ಟೆ, ಉಪ್ಪಿನಂಗಡಿ ಬ್ಲಾಕ್ ಕಾರ್ಯದರ್ಶಿ ತುಫೈಲ್, ಸಮಿತಿ ಸದಸ್ಯ ರಶೀದ್ ಮಠ ಸೇರಿದಂತೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಕ್ಷೇತ್ರ ಹಾಗೂ ಬ್ಲಾಕ್ ಮಟ್ಟದ ನಾಯಕರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಪ್ರತಿಭಟನಾ ಸಭೆಯನ್ನು SDPI ಬೆಳ್ತಂಗಡಿ ಕ್ಷೇತ್ರ ಕಾರ್ಯದರ್ಶಿ ಅಶ್ಫಾಕ್ ಪುಂಜಾಲಕಟ್ಟೆ ಸ್ವಾಗತಿಸಿ, ಉಪಾಧ್ಯಕ್ಷರಾದ ನಿಸಾರ್ ಕುದ್ರಡ್ಕ ಧನ್ಯವಾದಗೈದರು. ಸಮಿತಿ ಸದಸ್ಯರಾದ ಖಾದರ್ ನಾವೂರ ನಿರೂಪಿಸಿದರು.

LEAVE A REPLY

Please enter your comment!
Please enter your name here