

ಮಂಗಳೂರು; ತಂಗಿಯನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಅಣ್ಣ ಹಾಗೂ ಸಂಗಡಿಗರು ಸೇರಿ ಯುವಕನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಏಳು ವರ್ಷಗಳ ಹಿಂದೆ ಮಂಗಳೂರಿನ ಪಂಜಿಮೊಗರು ಎಂಬಲ್ಲಿ ನಡೆದಿದ್ದ ರಾಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
2019 ಜನವರಿ 3 ರಂದು ಪಂಜಿಮೊಗರು ಮಾಲಾಡಿ ರಸ್ತೆಯ M.V ಶೆಟ್ಟಿ ಕಾಲೇಜ್ ಬಳಿ ಕೊಲೆ ನಡೆದಿತ್ತು. ಪ್ರಕರಣದ ಪ್ರಮುಖ ಆರೋಪಿಯಾದ ಸುನಿಲ್ ಕುಮಾರ್ ಯಾನೆ ಕೌಟಿ ಎಂಬಾತನ ತಂಗಿಯನ್ನು ರಾಕೇಶ್ ಪ್ರೀತಿಸುತಿದ್ದನು ಎಂಬ ಕಾರಣಕ್ಕೆ ಸುನೀಲ್ ಕುಮಾರ್ ಯಾನೆ ಕೌಟಿ, ಪ್ರವೀಣ್ ಪೂಜಾರಿ ಯಾನೆ ಚೋಟು, ಪ್ರೀತಮ್ ಯಾನೆ ಅಭಿ, ರೋಹಿತ್ ಕುಮಾರ್ ಯಾನೆ ಶೂಟರ್ ಎಂಬುವವರು ಸೇರಿ ರಾಕೇಶ್ ನನ್ನು ಹತ್ಯೆ ಮಾಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸ್ ಠಾಣಾ 5. 02/2019 : 302 120(b)201 212 r/w 34 IPC ರಂತೆ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಕೆ.ಆರ್ ನಾಯ್ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣದ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು ನಾಲ್ಕು ಮಂದಿ ಆರೋಪಿಗಳನ್ನು ದೋಷಿ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.
ಆರೋಪಿಗಳಾದ ಸುನಿಲ್ ಕುಮಾರ್, ಪ್ರವೀಣ್ ಪೂಜಾರಿ, ಪ್ರೀತಂ ಎಂಬುವವರಿಗೆ ಕಲಂ: 302, 120(ಬಿ) ಜೊತೆಗೆ 34 ಐ.ಪಿ.ಸಿ ಪ್ರಕಾರ ಜೀವಾವಧಿ ಶಿಕ್ಷೆ ಜೊತೆಗೆ ತಲಾ ರೂ 15000 ದಂಡ, ಒಂದು ವೇಳೆ ದಂಡ ಪಾವತಿ ಸದಿದ್ದಲ್ಲಿ 1 ವರ್ಷ ಹೆಚ್ಚಿನ ಶಿಕ್ಷೆ ಘೋಷಿಸಿದೆ. ಪ್ರಕರಣದ ನಾಲ್ಕನೇ ಆರೋಪಿ ರೋಹಿತ್ ಕುಮಾರ್ ನಿಗೆ ಕಲಂ: 212 ಜೊತೆಗೆ 34 ಐ.ಪಿ.ಸಿ ಪ್ರಕಾರ 3 ವರ್ಷಗಳ ಕಾರಾವಾಸ ಜೊತೆಗೆ ತಲಾ ರೂ 5000 ದಂಡ, ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 1 ತಿಂಗಳ ಹೆಚ್ಚಿನ ಶಿಕ್ಷೆ ವಿಧಿಸಿ 6 ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಶಿಕ್ಷೆ ವಿಧಿಸಿದ್ದಾರೆ. ಸರಕಾರಿ ಅಭಿಯೋಜಕರಾಗಿ ಮೋತಿಲಾಲ್ ಚೌದರಿ ವಾದ ಮಂಡಿಸಿದ್ದರು.











