Home ಸ್ಥಳೀಯ ಸಮಾಚಾರ ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಣೆ – ಭಕ್ತಿ, ಸಂಗೀತಾರಾಧನೆ ಯೊಂದಿಗೆ...

ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಉತ್ಸವ ಸಂಪನ್ನಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಣೆ – ಭಕ್ತಿ, ಸಂಗೀತಾರಾಧನೆ ಯೊಂದಿಗೆ ನವರಾತ್ರಿ ಸಂಭ್ರಮ

3
0

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಒಂಬತ್ತು ದಿನಗಳ ಕಾಲ ನಡೆದ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಉತ್ಸವಗಳು ಅಕ್ಟೋಬರ್ 19ರಂದು ಮಹಾನವಮಿಯಂದು ಸಂಭ್ರಮದಿಂದ ಸಂಪನ್ನಗೊಂಡವು.

ಅಕ್ಟೋಬರ್ 11ರಿಂದ 19ರವರೆಗೆ ಪ್ರತಿದಿನ ರಾತ್ರಿ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ, ಉತ್ಸವ, ಕನ್ನಿಕಾ ಪೂಜೆ ಹಾಗೂ ಅಷ್ಟಾವಧಾನ ಸೇವೆಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಅಕ್ಟೋಬರ್ 17ರಂದು ಚಂಡಿಕಾ ಹವನವನ್ನು ವಿಶೇಷವಾಗಿ ನೆರವೇರಿಸಲಾಯಿತು.

ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ:

ಮಹಾನವಮಿ ಪ್ರಯುಕ್ತ ಅಕ್ಟೋಬರ್ 19ರಂದು ರಾತ್ರಿ ಶರನ್ನವರಾತ್ರಿಯ ವಿಶೇಷ ಉತ್ಸವಗಳು ಸಮಾಪನಗೊಂಡವು. ಈ ಸಂದರ್ಭದಲ್ಲಿ ಸಹಸ್ರಾರು ಮುತ್ತೈದೆಯರಿಗೆ ವಸ್ತ್ರ ಪ್ರಸಾದ ವಿತರಿಸಲಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮುತ್ತೈದೆಯರು ಸರತಿ ಸಾಲಿನಲ್ಲಿ ಶಿಸ್ತುಬದ್ಧವಾಗಿ ಬಂದು ಭಕ್ತಿಭಾವದಿಂದ ವಸ್ತ್ರ ಪ್ರಸಾದ ಸ್ವೀಕರಿಸಿದರು.

ಸಂಗೀತಾರಾಧನೆಯೊಂದಿಗೆ ನವರಾತ್ರಿ ವೈಭವ:

ಶರನ್ನವರಾತ್ರಿ ಉತ್ಸವದ ಅಂಗವಾಗಿ ಕ್ಷೇತ್ರದ ಪ್ರವಚನ ಮಂಟಪದಲ್ಲಿ ಪ್ರತಿದಿನ ಸಂಜೆ 6ರಿಂದ ರಾತ್ರಿ 8ರವರೆಗೆ ವಿವಿಧ ಸಂಗೀತ ಕಲಾವಿದರಿಂದ ಭಕ್ತಿಗೀತೆ ಹಾಗೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆದವು. ಸಂಗೀತ ಕಲಾವಿದರ ಭಕ್ತಿಪೂರ್ಣ ಗಾಯನವು ನವರಾತ್ರಿ ಉತ್ಸವಕ್ಕೆ ವಿಶೇಷ ಮೆರುಗು ನೀಡಿತು.

ಅಕ್ಟೋಬರ್ 19ರಂದು ರಾತ್ರಿ ಸಂಗೀತ ಕಾರ್ಯಕ್ರಮಗಳೂ ಸಮಾಪನಗೊಂಡವು. ಒಂಬತ್ತು ದಿನಗಳ ಕಾಲ ನಡೆದ ಪೂಜೆ, ಧಾರ್ಮಿಕ ವಿಧಿವಿಧಾನಗಳು, ಉತ್ಸವಗಳು ಹಾಗೂ ಸಂಗೀತಾರಾಧನೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಶರನ್ನವರಾತ್ರಿ ಮಹೋತ್ಸವವು ಭಕ್ತಿಪೂರ್ಣವಾಗಿ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here