ಬೆಳ್ತಂಗಡಿ; ಆದಿವಾಸಿ ಮಲೆಕುಡಿಯ ಸಮುದಾಯ ಕಾಡಲ್ಲಿದ್ದರೆ ಕಾಡು ಬಿಟ್ಟು ತೊಲಗಿ ಎನ್ನುವ ಸರಕಾರ ನಾಡಲ್ಲಿದ್ದರೆ ಒಕ್ಕೆಲೆಬ್ಬಿಸಲು ಬರುತ್ತದೆ ಎಂದರೆ ಭಾರತದ ಮೂಲ ನಿವಾಸಿಗಳಿಗೆ ಭಾರತದಲ್ಲಿ ಬದುಕುವ ಹಕ್ಕಿಲ್ಲವೇ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಸರಕಾರವನ್ನು ಪ್ರಶ್ನಿಸಿದರು.
ಅವರು ಸೋಮವಾರ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ನಾರಾವಿ ಕುತ್ಲೂರು ಭೂ ಸಂತ್ರಸ್ಥ ಆದಿವಾಸಿಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ನಡೆದ ಹೋರಾಟವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಕೇಂದ್ರ ಸರಕಾರ ಆದಿವಾಸಿಗಳ ಮತದಾನದ ಹಕ್ಕನ್ನು ಕಸಿದರೆ ರಾಜ್ಯ ಸರಕಾರ ಭೂಮಿ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತದೆ ಎಂದವರು ಟೀಕಿಸದರು. ಒಟ್ಟಾರೆ ಈ ಸರಕಾರಗಳಿಗೆ ಆದಿವಾಸಿಗಳ ಕಂಡರಾಗದೆ ಅವರ ಬದುಕುವ ಹಕ್ಕನ್ನೇ ಕಿತ್ತುಕೊಂಡು ಒಕ್ಕಲೆಬ್ಬಿಸಲು ಮುಂದಾದರೆ ನಾಳೆ ನಮಗೆ ತಾಲೂಕು ಕಚೇರಿಯೇ ನಮ್ಮ ಮನೆಯಾದೀತು ಎಂದು ಸರಕಾರವನ್ನ ಎಚ್ಚರಿಸಿದರು. ನಾರಾವಿ ಕುತ್ಲೂರಲ್ಲಿ ಸರಕಾರಿ ಜಮೀನಲ್ಲಿ ವಾಸ ಇದ್ದರೂ ಅಲ್ಲಿಂದಲೂ ಒಕ್ಕೆಲೆಬ್ಬಿಸಲು ಮುಂದಾಗುವುದು ಸರಿಯಲ್ಲ ಎಂದು ಅವರು ಸರಕಾರವನ್ನು ವಿನಂತಿಸಿದರು. 1996 ರಿಂದ ನಿರಂತರ ದೌರ್ಜನ್ಯಕ್ಕೊಳಾಗಾದ ಈ ಸಮುದಾಯದ ರಕ್ಷಣೆ ಮಾಡುವ ತನಕ ನಮ್ಮ ಹೋರಾಟ ನಿಲ್ಲದು ಎಂದರು.
ಈ ಸಂದರ್ಭ ಮಾತಾಡಿದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಸುಕುಮಾರ್ ದಿಡುಪೆ ನಾವು ಭಾರತದಲ್ಲಿ ಬದುಕುವುದನ್ನು ಸರಕಾರಕ್ಕೆ ಯಾಕೆ ಸಹಿಸಲಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು ಈ ನೆಲದ ಮೂಲನಿವಾಸಿಗಳು ನಾವು ಇದ್ದರೂ ಸತ್ತರೂ ಅದೇ ಜಮೀನಲ್ಲಿ ಎಂದು ಹೇಳಿದರು.
ಭೂ ಸಂತ್ರಸ್ಥರ ಹೋರಾಟ ಸಮಿತಿಯ ತಾಲೂಕು ಕಾರ್ಯದರ್ಶಿ ಸುದಾಕರ ಮಲೆಕುಡಿಯ ಸ್ವಾಗತಿಸಿ, ಸಿಐಟಿಯು ತಾಲೂಕು ಸಹ ಸಂಚಾಲಕಿ ಜಯಶ್ರೀ ವಂದಿಸಿದರು. ಹೋರಾಟದ ನೇತೃತ್ವದಲ್ಲಿ ಭೂ ಸಂತ್ರಸ್ಥರ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷೆ ಗೀತಾ, ಪ್ರಜಾತ, ಸುಜಾತ, ಸಿಐಟಿಯು ಮುಖಂಡರುಗಲಾದ ಪುಷ್ಪಾ, ರಾಮಚಂದ್ರ, ಅಶ್ವಿತ, ಅಪ್ಸ , ಸುಮಿತ್ರ ಮೊದಲಾದವರು ಇದ್ದರು.










