Home ಅಪರಾಧ ಲೋಕ ಕಕ್ಕಿಂಜೆ ವೃದ್ಧ ದಂಪತಿಯರ ಕೊಲೆ ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಕಕ್ಕಿಂಜೆ ವೃದ್ಧ ದಂಪತಿಯರ ಕೊಲೆ ಪ್ರಕರಣ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

35
0

ಬೆಳ್ತಂಗಡಿ: ತಾಲೂಕಿನ ಕಕ್ಕಿಂಜೆಯಲ್ಲಿ ಮನೆಗೆ ನುಗ್ಗಿ ವೃದ್ಧ ದಂಪತಿಗಳನ್ನು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನ, ನಗದು ದರೋಡೆ ಗೈದ ಪ್ರಕರಣದ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2016ರ ನವೆಂಬರ್ 10ರಂದು ರಾತ್ರಿ ಕಕ್ಕಿಂಜೆ ಹೈಸ್ಕೂಲ್ ನ ಹಿಂಬದಿಯ ಮನೆಯಲ್ಲಿ ವಾಸಿಸುತ್ತಿದ್ದ ವೃದ್ದ ದಂಪತಿಯರಾದ ವರ್ಕಿ ಹಾಗೂ ಏಲಿಕುಟ್ಟಿ ಅವರ ಕೊಲೆಯಾಗಿತ್ತು‌. ಕೊಲೆ ಪ್ರಕರಣದ ಅಪರಾಧಿ
ಗದಗ ಜಿಲ್ಲೆಯ ಬಿ.ಸಿ.ಕೇರಿ ನಿವಾಸಿ ರಾಜು ಕಲ್ಲವಡ್ದರ್ ಎಂಬಾತ ಅಪರಾಧಿ ಎಂಬುದು ಸಾಬೀತಾಗಿದ್ದು ಅವನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಈತ ಬೆಳ್ತಂಗಡಿಯ ನೆರಿಯಾ ಗ್ರಾಮದ ಬಾಂಜಾರು ಮಲೆ ಎಂಬಲ್ಲಿ ಡ್ಯಾಂ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡುತ್ತಿದ್ದ. 2016ರ ನವೆಂಬರ್ 10ರಂದು ರಾತ್ರಿ ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ಕಕ್ಕಿಂಜೆ ಕಲೇರಿಕಲ್ ಎಂಬಲ್ಲಿ ವಾಸವಿದ್ದ ವೃದ್ಧ ದಂಪತಿ ವರ್ಕಿ ಕೆ.ವಿ.(85) ಮತ್ತು ಎಲಿಕುಟ್ಟಿ (80) ಎಂಬವರ ಮನೆಗೆ ಬಂದುಕುಡಿಯಲು ನೀರು ಕೇಳಿದ್ದಾನೆ. ಆ ಮೇಲೆ ದಾರಿ ತೋರಿಸಬೇಕು ಎಂದು ನೆಪವೊಡ್ಡಿದ್ದಾನೆ. ಅದರಂತೆ ವರ್ಕಿ ಕೆ.ವಿ. ಅವರು ರಾಜುವಿಗೆ ಕತ್ತಲೆಯಲ್ಲಿ ಟಾರ್ಚ್‌ಲೈಟ್ ಮೂಲಕ ದಾರಿ ತೋರಿಸುತ್ತಾ ಮುಂದೆ ಹೋಗಿದ್ದಾರೆ. ಈ ವೇಳೆ ಮನೆಯಿಂದ ಸುಮಾರು 70 ಮೀ. ದೂರದಲ್ಲಿ ಆತ ವರ್ಕಿಯವರಿಗೆ ಉರುಗೋಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಬಳಿಕ ಉಟ್ಟಿದ್ದ ಲುಂಗಿಯಿಂದಲೇ ಅವರ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ.

ನಂತರ ಆತ ಮತ್ತೆ ಮನೆಯೊಳಗೆ ಪ್ರವೇಶಿಸಿ ಸೊತ್ತುಗಳನ್ನು ಜಾಲಾಡಿದ್ದಾನೆ. ಇದರಿಂದ ಎಚ್ಚರಗೊಂಡ ಎಲಿಕುಟ್ಟಿಯವರಿಗೂ ಆರೋಪಿಯು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ, ಬಟ್ಟೆಯಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಬಳಿಕ ಮನೆಯ ಗೋದ್ರೇಜ್, ಕಪಾಟುಗಳ ಬಾಗಿಲು ಮುರಿದು 25 ಪವನ್ ಚಿನ್ನ ಹಾಗೂ ನಗದು ಸೇರಿದಂತೆ ಅಂದಾಜು 4,50,000 ರೂ.ಗಳನ್ನು ಕದ್ದೊಯ್ದಿದ್ದ.
ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಅತ್ಯಂತ ಚಾಣಾಕ್ಷ ತನದಿಂದ ಬೆಳಕಿಗೆ ತಂದಿದ್ದರು. ಎರಡೇ ದಿನಗಳಲ್ಲಿ ಆರೋಪಿಯನ್ನು ಬಂಧಿಸುವ ಕಾರ್ಯ ಮಾಡಿದ್ದರು.
ಈ ಪ್ರಕರಣವನ್ನು ಬೆಳ್ತಂಗಡಿ ಪೊಲೀಸ್ ಠಾಣೆಯ ಅಂದಿನ ಪೊಲೀಸ್ ಉಪಾಧೀಕ್ಷಕ ರಾಹುಲ್ ಕುಮಾರ್ ಆರೋಪಿ ಬಂಧಿಸಿ ದೋಚಿದ ಸೊತ್ತುಗಳನ್ನು ವಶಪಡಿಸಿಕೊಂಡು ಭಾಗಶಃ ತನಿಖೆ ಪೂರೈಸಿದ್ದರು. ಪ್ರಕರಣದ ಮುಂದುವರಿದ ತನಿಖೆಯನ್ನು ಅಂದಿನ ಪೊಲೀಸ್ ಉಪಾಧೀಕ್ಷಕ ಭಾಸ್ಕರ್ ರೈ ಎನ್.ಜಿ. ನಡೆಸಿ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302, 392 ಅಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
2018ರ ನವೆಂಬರ್ 13ರಂದು ಪ್ರಕರಣದ ವಿಚಾರಣೆ ಆರಂಭಗೊಂಡಿತ್ತು‌. ಅಭಿಯೋಜನೆಯ ಪರ ಒಟ್ಟು 38 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಹಿಂದಿನ ಸರ್ಕಾರಿ ಅಭಿಯೋಜಕ ಶೇಖರ ಶೆಟ್ಟಿ ಕೆಲವು ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದರು. 2021ರಿಂದ ಉಳಿದ ಸಾಕ್ಷಿದಾರರನ್ನು ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ್ ವಿಚಾರಣೆ ಮಾಡಿ, ವಾದ ಮಂಡಿಸಿದ್ದಾರೆ.
ವಿಚಾರಣೆ ಮುಗಿಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಪ್ರಕರಣದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಆರೋಪಿತ ತಪ್ಪಿತಸ್ಥನೆಂದು ತೀರ್ಪು ನೀಡಿದ್ದಾರೆ. ಅದರಂತೆ ಆರೋಪಿಗೆ ಭಾ.ದಂ.ಸಂ ಕಲಂ 392ಕ್ಕೆ 10 ವರ್ಷಗಳ ಕಾಲ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಒಂದು ವೇಳೆ, ದಂಡ ಪಾವತಿಸಲು ವಿಫಲನಾದರೆ 3 ತಿಂಗಳ ಕಠಿಣ ಸಜೆಯನ್ನು ಅನುಭವಿಸಬೇಕು. ಭಾ.ದಂ.ಸಂ ಕಲಂ 302ರಡಿ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸಲು ವಿಫಲನಾದಲ್ಲಿ 3 ತಿಂಗಳ ಕಠಿಣ ಸಜೆಯನ್ನು ವಿಧಿಸಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.

ಈ ಎರಡು ಶಿಕ್ಷೆಗಳನ್ನು ಒಂದರ ನಂತರ ಒಂದರಂತೆ ಅನುಭವಿಸಲು ಆದೇಶಿಸಲಾಗಿದೆ. ಅಪರಾಧಿ ದಸ್ತಗಿರಿಯಾದ ಕಾಲದಿಂದ ಈವರೆಗೂ ನ್ಯಾಯಾಂಗ ಬಂಧನದಲ್ಲಿರುವ ಅವಧಿಯನ್ನು ಕಡಿತಗೊಳಿಸಿ, ಉಳಿದ ಅವಧಿಗೆ ಕಠಿಣ ಸಜೆ ಅನುಭವಿಸಲು ಆದೇಶ ಹೊರಡಿಸಲಾಗಿದೆ.

LEAVE A REPLY

Please enter your comment!
Please enter your name here