ಬೆಳ್ತಂಗಡಿ: ದಾವಣಗೆರೆಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಕಕ್ಕಿಂಜೆ ಸಮೀಪಿಸುತ್ತಿದ್ದಂತೆಯೇ ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಅಸ್ವಸ್ಥರಾಗಿ ಪ್ರಜ್ಞೆ ತಪ್ಪಿ, ಮಾತನಾಡಲು ಹಾಗೂ ದೇಹವನ್ನು ಚಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಗಮನಿಸಿದ ಸಹ ಪ್ರಯಾಣಿಕರು ಈ ಬಗ್ಗೆ ಚಾಲಕ ನಿರ್ವಾಹಕರಿಗೆ ಮಾಹಿತಿ ನೀಡಿದ್ದಾರೆ. ಪರಿಸ್ಥಿತಿಯ ತೀವ್ರತೆ ಅರಿತ ಬಸ್ ಚಾಲಕ ಕಿರಣ್ ಹಾಗೂ ನಿರ್ವಾಕ ಸಂತೋಷ್ ಸಂಗಪ್ಪ ಗೌಡ ಕಕ್ಕಿಂಜೆ ಬರುತ್ತಿದ್ದಂತೆಯೇ ನೇರವಾಗಿ ಬಸ್ಸನ್ನು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಕೊಂಡೊಯ್ದು ಸಂಕಷ್ಟದಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಅಶ್ರಫ್ ಚಾರ್ಮಾಡಿ, ಫಾರುಕ್ ಕಕ್ಕಿಂಜೆ, ಗಾಂಧಿನಗರ ಹಾಗೂ ನೌಫಾಲ್ ಕಕ್ಕಿಂಜೆ, ಗಾಂಧಿನಗರ ಅವರು ಮಹಿಳೆಗೆ ಅಗತ್ಯ ಸಹಾಯ ಮಾಡುವಲ್ಲಿ ಜೊತೆಯಾಗಿ ನಿಂತಿದ್ದಾರೆ.
