Home ರಾಜಕೀಯ ಸಮಾಚಾರ ರಸ್ತೆ ಅಗಲೀಕರಣದಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಆಗದಿರಲಿ: SDPI ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ

ರಸ್ತೆ ಅಗಲೀಕರಣದಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಆಗದಿರಲಿ: SDPI ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ

0

ಬೆಳ್ತಂಗಡಿ, ಸೆ.30: ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಬೆಳ್ತಂಗಡಿ ಪಟ್ಟಣ, ಗುರುವಾಯನಕೆರೆ ಹಾಗೂ ಉಜಿರೆ ಪೇಟೆ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಹಲವು ಅಂಗಡಿ-ಮುಂಗಟ್ಟುಗಳು ಹಾಗೂ ಕಟ್ಟಡಗಳ ತೆರವು ಪ್ರಕ್ರಿಯೆ ನಡೆಯುತ್ತಿದೆ. ಆದರೆ ರಸ್ತೆ ಅಗಲೀಕರಣದ ಹೆಸರಿನಲ್ಲಿ ಪಟ್ಟಣದ ಸ್ವರೂಪ ಮತ್ತು ಸೌಂದರ್ಯಕ್ಕೆ ಧಕ್ಕೆ ಉಂಟಾಗದಂತೆ ಸಂಬಂಧಪಟ್ಟ ಇಲಾಖೆ ಹಾಗೂ ಕಟ್ಟಡ ಮಾಲೀಕರು ಸಮನ್ವಯದಿಂದ ಕ್ರಮ ಕೈಗೊಳ್ಳಬೇಕು ಎಂದು SDPI ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಆಗ್ರಹಿಸಿದ್ದಾರೆ.

ರಸ್ತೆ ಅಗಲೀಕರಣದ ಬಳಿಕ ತೆರವುಗೊಳಿಸಲಾದ ಕೆಲವು ಹಳೆಯ ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸದೆ ದುರಸ್ತಿ ಮಾಡಿ ಅದೇ ರೀತಿಯಲ್ಲಿ ವ್ಯಾಪಾರ ಮುಂದುವರಿಸಲಾಗುತ್ತಿರುವುದು ಪಟ್ಟಣದ ಸೌಂದರ್ಯ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲ. ರಸ್ತೆ ಅಭಿವೃದ್ಧಿಯೊಂದಿಗೆ ಪಟ್ಟಣದ ಒಟ್ಟಾರೆ ವಿನ್ಯಾಸ, ಸಂಚಾರ ವ್ಯವಸ್ಥೆ ಹಾಗೂ ಭವಿಷ್ಯದ ಅಗತ್ಯಗಳನ್ನೂ ಪರಿಗಣಿಸಬೇಕು ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ರಸ್ತೆಯ ಮಧ್ಯಭಾಗದಿಂದ ನಿಗದಿತ ಅಂತರವನ್ನು ಕಾಯ್ದುಕೊಂಡು ಕಟ್ಟಡ ನಿರ್ಮಿಸಬೇಕಾಗಿರುವುದರಿಂದ ಕಟ್ಟಡ ಮಾಲೀಕರಿಗೆ ಜಾಗದ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಳೆಯ ಕಟ್ಟಡಗಳನ್ನು ದುರಸ್ತಿ ಮಾಡಿಕೊಂಡು ಅದೇ ಸ್ವರೂಪದಲ್ಲಿ ವ್ಯಾಪಾರ ಮುಂದುವರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳೀಯ ಪರಿಸ್ಥಿತಿ ಹಾಗೂ ವ್ಯಾಪಾರಿಗಳ ಸಮಸ್ಯೆಗಳನ್ನು ಪರಿಗಣಿಸಿ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ನಿಯಮಗಳ ಅನುಷ್ಠಾನದ ಕುರಿತು ಪ್ರಾಧಿಕಾರವು ಪುನರ್ ಪರಿಶೀಲನೆ ನಡೆಸಬೇಕು ಎಂದು ಅಕ್ಬರ್ ಆಗ್ರಹಿಸಿದ್ದಾರೆ.

ಅದೇ ವೇಳೆ ಕಟ್ಟಡ ಮಾಲೀಕರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳನ್ನು ಕೇವಲ ದುರಸ್ತಿ ಮಾಡಿ ಮುಂದುವರಿಸುವ ಬದಲು, ಸಾಧ್ಯವಿರುವ ಕಡೆಗಳಲ್ಲಿ ಅವುಗಳನ್ನು ತೆರವುಗೊಳಿಸಿ ಸುರಕ್ಷಿತ ಹಾಗೂ ಪಟ್ಟಣದ ಒಟ್ಟಾರೆ ವಿನ್ಯಾಸಕ್ಕೆ ಹೊಂದಿಕೊಳ್ಳುವ ಆಧುನಿಕ ಕಟ್ಟಡಗಳನ್ನು ನಿರ್ಮಿಸುವ ಮೂಲಕ ಪಟ್ಟಣದ ಸೌಂದರ್ಯ ಕಾಪಾಡಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ರಸ್ತೆ ಅಗಲೀಕರಣವು ಕೇವಲ ರಸ್ತೆ ವಿಸ್ತರಣೆಗೆ ಸೀಮಿತವಾಗದೆ, ಬೆಳ್ತಂಗಡಿ ಪಟ್ಟಣದ ಭವಿಷ್ಯದ ಅಭಿವೃದ್ಧಿ, ಸಂಚಾರ ವ್ಯವಸ್ಥೆ, ಸಾರ್ವಜನಿಕರ ಸುರಕ್ಷತೆ ಹಾಗೂ ಅನುಕೂಲವನ್ನು ಒಳಗೊಂಡ ಸಮಗ್ರ ಯೋಜನೆಯಾಗಬೇಕು. ಹೆದ್ದಾರಿ ಪ್ರಾಧಿಕಾರ, ಸ್ಥಳೀಯಾಡಳಿತ ಹಾಗೂ ಕಟ್ಟಡ ಮಾಲೀಕರು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಬೆಳ್ತಂಗಡಿ, ಗುರುವಾಯನಕೆರೆ ಹಾಗೂ ಉಜಿರೆ ಪೇಟೆಗಳನ್ನು ಮತ್ತಷ್ಟು ಸುಂದರ ಮತ್ತು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲು ಸಾಧ್ಯ ಎಂದು ಅಕ್ಬರ್ ಬೆಳ್ತಂಗಡಿ ತಿಳಿಸಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಪಟ್ಟಣದ ಸೌಂದರ್ಯ ಕಳೆದುಹೋಗಬಾರದು; ಅದೇ ರೀತಿ ಸೌಂದರ್ಯದ ಹೆಸರಿನಲ್ಲಿ ಅಭಿವೃದ್ಧಿಗೂ ಅಡ್ಡಿಯಾಗಬಾರದು. ಎರಡನ್ನೂ ಸಮನ್ವಯಗೊಳಿಸುವ ವೈಜ್ಞಾನಿಕ ಹಾಗೂ ಜನಪರ ಯೋಜನೆ ಅಗತ್ಯವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version