Home ರಾಜಕೀಯ ಸಮಾಚಾರ ನೀಲಿ ಶಾಲಿನ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆ ದುರಹಂಕಾರದ ಪರಮಾವಧಿ: ರಕ್ಷಿತ್ ಶಿವರಾಂ

ನೀಲಿ ಶಾಲಿನ ಬಗ್ಗೆ ಪ್ರತಾಪ್ ಸಿಂಹ ಹೇಳಿಕೆ ದುರಹಂಕಾರದ ಪರಮಾವಧಿ: ರಕ್ಷಿತ್ ಶಿವರಾಂ

2
0

ಬೆಳ್ತಂಗಡಿ: ದಲಿತ ಸಂಘಟನೆಗಳ ಕಾರ್ಯಕರ್ತರು ಹಾಗೂ ದಲಿತ ಸಮುದಾಯದ ಸ್ವಾಭಿಮಾನದ ಸಂಕೇತವಾಗಿರುವ ನೀಲಿ ಶಾಲಿನ ಕುರಿತು ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ನೀಡಿರುವ ಹೇಳಿಕೆ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದ್ದಾರೆ.

ನೀಲಿ ಶಾಲು ಕೇವಲ ಒಂದು ಬಣ್ಣದ ಶಾಲು ಅಲ್ಲ. ಅದು ದಲಿತ ಸಮುದಾಯದ ಸ್ವಾಭಿಮಾನ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಹೋರಾಟದೊಂದಿಗೆ ಗುರುತಿಸಿಕೊಂಡಿರುವ ಸಂಕೇತವಾಗಿದೆ. ಸಾವಿರಾರು ವರ್ಷಗಳಿಂದ ಜಾತಿ ಅಸ್ಪೃಶ್ಯತೆ, ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯದ ವಿರುದ್ಧ ನಡೆದ ಹೋರಾಟಗಳಿಗೆ ಇದು ಸ್ಪೂರ್ತಿಯ ಸಂಕೇತವಾಗಿ ಬೆಳೆದು ಬಂದಿದೆ. ಇಂತಹ ಸಂಕೇತದ ಬಗ್ಗೆ ಪ್ರಶ್ನಿಸುವ ಮೂಲಕ ದಲಿತ ಸಮುದಾಯದ ಸ್ವಾಭಿಮಾನವನ್ನೇ ಪ್ರಶ್ನಿಸಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ದಲಿತ ಸಂಘಟನೆಗಳು ಮತ್ತು ನೀಲಿ ಶಾಲಿನ ಕುರಿತು ಮಾತನಾಡುವ ಮುನ್ನ ಪ್ರತಾಪ್ ಸಿಂಹ ಅವರು ತಮ್ಮದೇ ಹೇಳಿಕೆಗಳ ಸಾಮಾಜಿಕ ಹಾಗೂ ರಾಜಕೀಯ ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕು. ರಾಜಕೀಯ ಅಸ್ತಿತ್ವಕ್ಕಾಗಿ ವಿವಿಧ ಸಂಕೇತಗಳನ್ನು ಬಳಸುವವರು ಮತ್ತೊಂದು ಸಮುದಾಯದ ಸ್ವಾಭಿಮಾನದ ಸಂಕೇತವನ್ನು ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ರಕ್ಷಿತ್ ಶಿವರಾಮ್ ಹೇಳಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹೋರಾಟದ ಕುರಿತು ದಲಿತ ಸಮುದಾಯಕ್ಕೆ ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ. ಅಂಬೇಡ್ಕರ್ ಅವರ ವಿಚಾರಗಳನ್ನು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವ ಪ್ರಯತ್ನವನ್ನು ದಲಿತ ಸಮುದಾಯ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರತಾಪ್ ಸಿಂಹ ಅವರು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆದು, ದಲಿತ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವುದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಅವರ ಹೇಳಿಕೆಯ ವಿರುದ್ಧ ರಾಜ್ಯಾದ್ಯಂತ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ವಿವಿಧ ಕಾರ್ಯಕ್ರಮಗಳಲ್ಲಿ ಅವರ ಭಾಗವಹಿಸುವಿಕೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ದಲಿತ ಸಂಘಟನೆಗಳು ತಮ್ಮ ಆಕ್ರೋಶವನ್ನು ದಾಖಲಿಸಲಿವೆ ಎಂದು ರಕ್ಷಿತ್ ಶಿವರಾಂ ಎಚ್ಚರಿಸಿದ್ದಾರೆ.

LEAVE A REPLY

Please enter your comment!
Please enter your name here