Home ಸ್ಥಳೀಯ ಸಮಾಚಾರ ಶಿಥಿಲಗೊಂಡ‌ ನಿಟ್ಟಡೆ-ಅಂಡಿಂಜೆ ಸಂಪರ್ಕದ ಫಂಡಿಜೆ ತೂಗು ಸೇತುವೆ; ಇಲ್ಲಿ ಒಬ್ಬರು ಮಾತ್ರ ಸೇತುವೆಯಲ್ಲಿ ನಡೆಯಬೇಕು ಸಂಕಷ್ಟದಲ್ಲಿ...

ಶಿಥಿಲಗೊಂಡ‌ ನಿಟ್ಟಡೆ-ಅಂಡಿಂಜೆ ಸಂಪರ್ಕದ ಫಂಡಿಜೆ ತೂಗು ಸೇತುವೆ; ಇಲ್ಲಿ ಒಬ್ಬರು ಮಾತ್ರ ಸೇತುವೆಯಲ್ಲಿ ನಡೆಯಬೇಕು ಸಂಕಷ್ಟದಲ್ಲಿ ಜನರು

3
0

ಬೆಳ್ತಂಗಡಿ; ನಿಟ್ಟಡೆ-ಅಂಡಿಂಜೆ ಗ್ರಾಮಗಳ ಸಂಪರ್ಕ ಕಲ್ಪಿಸುವ ಫಂಡಿಜೆ ತೂಗು ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು, ಅಪಾಯದ ಹಿನ್ನೆಲೆಯಲ್ಲಿ ಏಕಕಾಲದಲ್ಲಿ ಒಬ್ಬರು ಮಾತ್ರ ನಡೆದುಕೊಂಡು ಹೋಗುವಂತೆ ಕುಕ್ಕೇಡಿ ಗ್ರಾಮ ಪಂಚಾಯಿತಿ ಎಚ್ಚರಿಕೆ ಫಲಕ ಅಳವಡಿಸಿದೆ. ಸೇತುವೆಯ ವಿವಿಧ ಭಾಗಗಳು ಹಾಳಾಗಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದ್ದು, ತುರ್ತಾಗಿ ದುರಸ್ತಿ ಕಾಮಗಾರಿ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

2001ರಲ್ಲಿ ಅಂದಿನ ಸಂಸದ ಡಿ.ಸಿ. ಶ್ರೀಕಂಠಪ್ಪ ಅವರ ಅನುದಾನ ಜತೆಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ದಾನಿಗಳ ಸಹಕಾರದಿಂದ ಈ ತೂಗು ಸೇತುವೆ ನಿರ್ಮಿಸಲಾಗಿತ್ತು. ನಿಟ್ಟಡೆ ಹಾಗೂ ಫಂಡಿಜೆ ಗ್ರಾಮಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ಕಳೆದ ಹಲವು ವರ್ಷಗಳಿಂದ ನೂರಾರು ಮಂದಿಯ ದೈನಂದಿನ ಸಂಚಾರಕ್ಕೆ ಆಧಾರವಾಗಿದೆ.
ತೂಗು ಸೇತುವೆ ನಿರ್ಮಾಣಕ್ಕೂ ಮೊದಲು ಫಂಡಿಜೆ ಭಾಗದ ಜನರು ಫಲ್ಗುಣಿ ನದಿ ದಾಟಲು ದೋಣಿಯನ್ನೇ ಅವಲಂಬಿಸಬೇಕಾಗಿತ್ತು. ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಸಂದರ್ಭ ದೋಣಿ ಸಂಚಾರವೂ ಅಪಾಯಕಾರಿಯಾಗುತ್ತಿತ್ತು. ಸೇತುವೆ ನಿರ್ಮಾಣವಾದ ಬಳಿಕ ಈ ಭಾಗದ ಜನರ ಸಂಚಾರಕ್ಕೆ ದೊಡ್ಡ ಅನುಕೂಲವಾಗಿದ್ದು, ಅಂಡಿಜೆ, ಕೊಕ್ರಾಡಿ,ವೇಣೂರು ಸೇರಿದಂತೆ ಹಲವು ಪ್ರದೇಶಗಳ ಸಂಪರ್ಕವೂ ಸುಗಮಗೊಂಡಿದೆ.
ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಿಗಳು, ಹೈನುಗಾರರು, ಕೃಷಿಕರು ಸೇರಿದಂತೆ ನೂರಾರು ಮಂದಿ ಪ್ರತಿದಿನ ಈ ಸೇತುವೆಯನ್ನು ಬಳಸುತ್ತಿದ್ದಾರೆ. ಹೀಗಾಗಿ ಸೇತುವೆಯ ಸುರಕ್ಷತೆ ಸ್ಥಳೀಯರ ದೈನಂದಿನ ಬದುಕಿನೊಂದಿಗೆ ನೇರವಾಗಿ ಸಂಬಂಧ ಹೊಂದಿದೆ.
-ನಿರ್ವಹಣೆ ಕೊರತೆಯಿಂದ ಅಪಾಯ-
ನಿರಂತರ ಬಳಕೆ ಮತ್ತು ಸಮರ್ಪಕ ನಿರ್ವಹಣೆಯ ಕೊರತೆಯಿಂದ ಸೇತುವೆ ಇದೀಗ ದುಸ್ಥಿತಿಗೆ ತಲುಪಿದೆ. ಸುಮಾರು ಎರಡು ವರ್ಷಗಳ ಹಿಂದೆ ಶಾಸಕ ಹರೀಶ್ ಪೂಂಜ ಅವರ ಅನುದಾನದಲ್ಲಿ ಕಬ್ಬಿಣದ ಪಟ್ಟಿಗಳನ್ನು ಅಳವಡಿಸಿ ಸೇತುವೆಗೆ ದುರಸ್ತಿ ಕೈಗೊಳ್ಳಲಾಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಮತ್ತೆ ಸೇತುವೆಯ ಭಾಗಗಳು ಹದಗೆಟ್ಟಿವೆ.
ಸೇತುವೆಯ ಕಬ್ಬಿಣದ ರೋಪ್‌ ಗಳು, ಮೇಲ್ಭಾಗದ ಮರದ ತುಂಡುಗಳು ಹಾಗೂ ಕಬ್ಬಿಣದ ಪಟ್ಟಿಗಳು ಹಾಳಾಗಿದ್ದು, ಹಲವು ಕಡೆಗಳಲ್ಲಿ ಸೇತುವೆಯ ಸಾಮರ್ಥ್ಯ ಕುಂಠಿತವಾಗಿದೆ. ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಏಕಕಾಲದಲ್ಲಿ ಸಂಚರಿಸಿದರೆ ಹೆಚ್ಚಿನ ಭಾರದಿಂದ ಸೇತುವೆ ಮುರಿದು ಬೀಳುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
-ಪಂಚಾಯಿತಿ ಮುನ್ನೆಚ್ಚರಿಕೆ-
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕೇಡಿ ಗ್ರಾಮ ಪಂಚಾಯಿತಿ ಸೇತುವೆಯ ಬಳಿ ಎಚ್ಚರಿಕೆ ಫಲಕ ಅಳವಡಿಸಿ, ಏಕಕಾಲದಲ್ಲಿ ಒಬ್ಬರು ಮಾತ್ರ ನಡೆದುಕೊಂಡು ಹೋಗುವಂತೆ ಸೂಚಿಸಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ಸೇತುವೆಯ ಸಂಪೂರ್ಣ ಸ್ಥಿತಿಗತಿಯನ್ನು ತಾಂತ್ರಿಕವಾಗಿ ಪರಿಶೀಲಿಸಿ, ಅಗತ್ಯವಿರುವ ಕಡೆ ಹೊಸ ರೋಪ್‌, ಮರದ ತುಂಡುಗಳು, ಕಬ್ಬಿಣದ ಪಟ್ಟಿಗಳು ಹಾಗೂ ಇತರ ಭಾಗಗಳನ್ನು ಬದಲಿಸಿ ಸಮಗ್ರ ದುರಸ್ತಿ ನಡೆಸುವ ಅಗತ್ಯವಿದೆ.

-ಮುರಿದು ಬೀಳುವ ಮುನ್ನ ಕ್ರಮ ಅಗತ್ಯ-

2001ರಲ್ಲಿ ದುರ್ಗದ ಉಮಾನಾಥ ಪಾಠಕ್ ಅವರ ಮುಂದಾಳತ್ವದಲ್ಲಿ ನಿರ್ಮಾಣಗೊಂಡಿರುವ ಈ ತೂಗು ಸೇತುವೆ ಈ ಭಾಗದ ಜನರಿಗೆ ಹಲವು ವರ್ಷಗಳಿಂದ ಪ್ರಮುಖ ಸಂಪರ್ಕ ಸೇತುವೆಯಾಗಿದೆ. ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಾವಸ್ಥೆ ತಲುಪಿರುವುದರಿಂದ ಜನರು ಭಯದಲ್ಲೇ ಸಂಚರಿಸುವಂತಾಗಿದೆ.
ಸೇತುವೆ ಮುರಿದು ಬಿದ್ದ ಬಳಿಕ ಪರಿಹಾರ ಕಂಡುಕೊಳ್ಳುವುದಕ್ಕಿಂತ ಮುನ್ನವೇ ಅಗತ್ಯ ಕಾಮಗಾರಿ ನಡೆಸಬೇಕು. ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರತಿನಿತ್ಯ ಬಳಸುವ ಸೇತುವೆಯಾಗಿರುವುದರಿಂದ ಸಂಬಂಧಪಟ್ಟ ಇಲಾಖೆ ತಕ್ಷಣ ಗಮನಹರಿಸಬೇಕು.
ಸೇತುವೆಯ ಪ್ರಸ್ತುತ ಸ್ಥಿತಿಯ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಸಿ, ತುರ್ತು ದುರಸ್ತಿಗೆ ಅನುದಾನ ಒದಗಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಫಂಡಿಜೆಯ ರತ್ನಾಕರ ಹೆಬ್ಬಾರ್,ದಿನೇಶ್ ಫಾಠಕ್
ಸಹಿತ ಪರಿಸರದ ಮಂದಿ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here