
ವಡೋದರ: ಗುಜರಾತ್ನ ವಡೋದರದಲ್ಲಿ ಗುಜರಾತ್ ಬಿಲ್ಲವ ಸಂಘದ ವತಿಯಿಂದ 172ನೇ ಶ್ರೀ ನಾರಾಯಣ ಗುರು ಜಯಂತಿಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಹಾಗೂ ನಿವೃತ್ತ ಎಸ್ಪಿ ಶ್ರೀ ಪೀತಾಂಬರ ಹೆರಾಜೆ ಅವರು ಶ್ರೀ ನಾರಾಯಣ ಗುರುಗಳ ಕುರಿತ ಕೃತಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ದೇಶ-ವಿದೇಶಗಳಲ್ಲಿ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿರುವುದು ಸಂತಸದ ಸಂಗತಿ ಎಂದರು.
ಗೆಜ್ಜೆಗಿರಿ ಕ್ಷೇತ್ರದ ಅಧ್ಯಕ್ಷ ಶ್ರೀ ರವಿ ಪೂಜಾರಿ ಚಿಲಿಂಬಿ ಮಾತನಾಡಿ, ಮನುಷ್ಯರನ್ನು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನ ಮತ್ತು ಬೆಳಕಿನೆಡೆಗೆ ಕೊಂಡೊಯ್ದ ಮಹಾನ್ ಶಕ್ತಿ ಶ್ರೀ ನಾರಾಯಣ ಗುರುಗಳು. ಅವರ ತತ್ವ, ಆದರ್ಶ ಮತ್ತು ಮಾನವೀಯ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಶ್ರೀ ಜಯಂತ ನಡುಬೈಲ್ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀ ಸಂಜೀವ ಪೂಜಾರಿ ಬಿರುವ ಅವರು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆಯುರ್ವೇದ ಕೇಂದ್ರದ ಕಾಮಗಾರಿಯ ಕುರಿತು ಮಾಹಿತಿ ನೀಡಿ, ಅದರ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಕೋರಿದರು.
ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ಶ್ರೀ ದಯಾನಂದ ಬೊಂಟ್ರಾ ಹಾಗೂ ಅಧ್ಯಕ್ಷ ಶ್ರೀ ಹರೀಶ್ ಪೂಜಾರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಗುಜರಾತ್ ಕನ್ನಡ ಸಂಘದ ಅಧ್ಯಕ್ಷ ಶ್ರೀ ಎಚ್.ಎನ್. ಬೆಳ್ಳೂರು, ವಾಪಿ ತುಳುಕೂಟದ ಅಧ್ಯಕ್ಷ ಶ್ರೀ ಬಾಲಕೃಷ್ಣ ಶೆಟ್ಟಿ, ಪಟ್ಲ ಫೌಂಡೇಶನ್ ಅಧ್ಯಕ್ಷ ಶ್ರೀ ಅಜಿತ್ ಶೆಟ್ಟಿ, ಸೂರತ್ ಬಿಲ್ಲವ ಸಂಘದ ಅಧ್ಯಕ್ಷ ಶ್ರೀ ಮನೋಜ್ ಪೂಜಾರಿ, ಶ್ರೀಮತಿ ಪ್ರಮೀಳಾ ಶಶಿಧರ ಶೆಟ್ಟಿ, ಕೋಶಾಧಿಕಾರಿ ಶ್ರೀ ಪ್ರಭಾಕರ ಪೂಜಾರಿ, ಮುಂಬೈ ಬಿಲ್ಲವರ ಸಂಘದ ಮಹಿಳಾ ಅಧ್ಯಕ್ಷೆ ಶ್ರೀಮತಿ ಶಕುಂತಲಾ ಕೋಟ್ಯಾನ್, ಶ್ರೀ ವಿಶ್ವನಾಥ ಪೂಜಾರಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮುದಾಯದ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಯಿತು. ಸಂಘದ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹರಿಕಥೆ ಕಾರ್ಯಕ್ರಮವೂ ನಡೆಯಿತು. ವೈವಾಹಿತ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಮಾಜಿ ಕೋಶಾಧಿಕಾರಿ ಶ್ರೀ ವಾಸು ಪೂಜಾರಿ ದಂಪತಿಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.
ಶ್ರೀ ನಾರಾಯಣ ಗುರುಗಳ “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಮಾನವೀಯ ಸಂದೇಶವನ್ನು ಸ್ಮರಿಸುತ್ತಾ, ಸಮಾಜದಲ್ಲಿ ಶಿಕ್ಷಣ, ಸಂಘಟನೆ, ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂಕಲ್ಪದೊಂದಿಗೆ ಶ್ರೀ ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.





