ಮಂಗಳೂರು: ದಕ್ಷಿಣ ಕನ್ನಡ ಹಾಗೂ ಕರಾವಳಿ ಜಿಲ್ಲೆಗಳ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ವಾಮಂಜೂರಿನ ಪಿಲಿಕುಳ ಗಾಲ್ಫ್ ಕ್ಲಬ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿದರು.
ಬೆಳ್ತಂಗಡಿ ಧಾರ್ಮಿಕ, ಐತಿಹಾಸಿಕ, ಪ್ರಕೃತಿ, ಸಾಹಸ ಹಾಗೂ ಜೈನ ಪ್ರವಾಸೋದ್ಯಮದ ಅಪಾರ ಸಾಧ್ಯತೆಗಳನ್ನು ಹೊಂದಿದ್ದು, ಪ್ರಮುಖ ಪ್ರವಾಸಿ ತಾಣಗಳಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ, ಪಾರ್ಕಿಂಗ್, ವಿಶ್ರಾಂತಿ ಕೇಂದ್ರ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಮನವಿ ಮಾಡಿದರು.
ಧಾರ್ಮಿಕ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡುವಂತೆ ಆಗ್ರಹಿಸಿದ ಅವರು, ಧರ್ಮಸ್ಥಳ, ಸೌತಡ್ಕ, ಶಿಶಿಲ, ಸೂರ್ಯ–ಸದಾಶಿವೇಶ್ವರ ಕ್ಷೇತ್ರ, ವೇಣೂರು ಮಹಾಲಿಂಗೇಶ್ವರ, ನಾಳ ದುರ್ಗಾಪರಮೇಶ್ವರಿ ಹಾಗೂ ಪಡ್ಯಾರಬೆಟ್ಟ ಸೇರಿದಂತೆ ಪ್ರಮುಖ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡ ವಿಶೇಷ ದೇವಾಲಯ ಪ್ರವಾಸೋದ್ಯಮ ಪ್ಯಾಕೇಜ್ ರೂಪಿಸುವಂತೆ ಪ್ರಸ್ತಾಪಿಸಿದರು.
ಗಡಾಯಿಕಲ್–ಜಮಾಲಾಬಾದ್‌ಗೆ ರೋಪ್‌ವೇ
ಬೆಳ್ತಂಗಡಿಯ ಐತಿಹಾಸಿಕ ಗಡಾಯಿಕಲ್ (ಜಮಾಲಾಬಾದ್) ಕೋಟೆಗೆ ರೋಪ್‌ವೇ ನಿರ್ಮಿಸುವ ಬೇಡಿಕೆಯನ್ನು ರಕ್ಷಿತ್ ಶಿವರಾಂ ಸಚಿವರ ಮುಂದಿಟ್ಟರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆ.ಜೆ. ಜಾರ್ಜ್, ರೋಪ್‌ವೇ ಯೋಜನೆಗೆ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರೋಪ್‌ವೇ ನಿರ್ಮಾಣದಿಂದ ಐತಿಹಾಸಿಕ ಕೋಟೆಯನ್ನು ದೇಶ-ವಿದೇಶದ ಪ್ರವಾಸಿಗರು ಸುಲಭವಾಗಿ ತಲುಪಲು ಸಾಧ್ಯವಾಗುವುದರ ಜೊತೆಗೆ ಬೆಳ್ತಂಗಡಿಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆಯಲಿದೆ ಎಂದು ರಕ್ಷಿತ್ ಶಿವರಾಂ ಹೇಳಿದರು.
ಜಲಪಾತ, ನೇತ್ರಾವತಿ–ಎಳನೀರು ಅಭಿವೃದ್ಧಿಗೆ ಆಗ್ರಹ
ಬೆಳ್ತಂಗಡಿಯ ಜಲಪಾತಗಳನ್ನು ಪ್ರಮುಖ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ರಸ್ತೆ, ಪಾರ್ಕಿಂಗ್, ಶೌಚಾಲಯ, ಕುಡಿಯುವ ನೀರು, ಸೂಚನಾ ಫಲಕ ಹಾಗೂ ಸುರಕ್ಷತಾ ವ್ಯವಸ್ಥೆ ಕಲ್ಪಿಸುವಂತೆ ಅವರು ಒತ್ತಾಯಿಸಿದರು. ನೇತ್ರಾವತಿ ಉಗಮಸ್ಥಾನ ಸುತ್ತಮುತ್ತಲಿನ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಗೂ ವಿಶೇಷ ಯೋಜನೆ ರೂಪಿಸುವಂತೆ ಮನವಿ ಮಾಡಿದರು.
ದೇಶದ ಪ್ರಮುಖ ಟ್ರೆಕ್ಕಿಂಗ್ ತಾಣವಾಗಿ ಗುರುತಿಸಿಕೊಳ್ಳುತ್ತಿರುವ ಎಳನೀರು–ನೇತ್ರಾವತಿ ಶಿಖರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಅವರು ಹೇಳಿದರು. ಪರಿಸರ ಸಂರಕ್ಷಣೆಯೊಂದಿಗೆ ಮೂಲಸೌಕರ್ಯ ಕಲ್ಪಿಸಿದರೆ ಸ್ಥಳೀಯ ಯುವಜನರಿಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳು ಹೆಚ್ಚಲಿವೆ ಎಂದರು.
ಕಾಜೂರುದರ್ಗಾ, ಜೈನ ಪ್ರವಾಸೋದ್ಯಮ ಸರ್ಕ್ಯೂಟ್
ಕಾಜೂರು ದರ್ಗಾ ಹಾಗೂ ಸುತ್ತಮುತ್ತಲಿನ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ರಕ್ಷಿತ್ ಶಿವರಾಂ ಮನವಿ ಮಾಡಿದರು.
ಅದೇ ರೀತಿ ಬೆಳ್ತಂಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಜೈನ ಪರಂಪರೆಯನ್ನು ಪ್ರವಾಸೋದ್ಯಮದೊಂದಿಗೆ ಜೋಡಿಸಲು ಜೈನ ಪ್ರವಾಸೋದ್ಯಮ ಸರ್ಕ್ಯೂಟ್ ರೂಪಿಸುವಂತೆ ಪ್ರಸ್ತಾಪಿಸಿದರು. ಎರಡು ಪ್ರಮುಖ ಬಾಹುಬಲಿ ಪ್ರತಿಮೆಗಳು ಹಾಗೂ 45ಕ್ಕೂ ಅಧಿಕ ಜೈನ ಬಸದಿ ಮತ್ತು ಪಾರಂಪರಿಕ ತಾಣಗಳನ್ನು ಒಳಗೊಂಡ ಸರ್ಕ್ಯೂಟ್ ರೂಪಿಸಿದರೆ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ಧರ್ಮಸ್ಥಳ ಬಸ್ ನಿಲ್ದಾಣ ಮೇಲ್ದರ್ಜೆಗೆ
ದೇಶದ ಪ್ರಮುಖ ಧಾರ್ಮಿಕ ಪ್ರವಾಸಿ ತಾಣವಾಗಿರುವ ಧರ್ಮಸ್ಥಳಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಬಸ್ ನಿಲ್ದಾಣ ಮತ್ತು ಬಸ್ ಡಿಪೋವನ್ನು ಮೇಲ್ದರ್ಜೆಗೇರಿಸುವಂತೆ ರಕ್ಷಿತ್ ಶಿವರಾಂ ಆಗ್ರಹಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಾಮಾನ್ಯ ಹಾಗೂ ವಿದ್ಯುತ್ ಬಸ್‌ಗಳ ಸೇವೆ ಕಲ್ಪಿಸುವ ಮೂಲಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವಂತೆ ಮನವಿ ಮಾಡಿದರು.
“ಪ್ರವಾಸೋದ್ಯಮದ ಅಭಿವೃದ್ಧಿ ಎಂದರೆ ಕೇವಲ ಪ್ರವಾಸಿಗರನ್ನು ಕರೆತರುವುದಲ್ಲ. ಉತ್ತಮ ರಸ್ತೆ, ಸಾರಿಗೆ, ಸುರಕ್ಷತೆ ಮತ್ತು ಮೂಲಸೌಕರ್ಯಗಳ ಜೊತೆಗೆ ಸ್ಥಳೀಯ ಯುವಜನರಿಗೆ ಉದ್ಯೋಗ ಹಾಗೂ ಸ್ಥಳೀಯ ಆರ್ಥಿಕತೆಗೆ ಬಲ ನೀಡುವಂತಹ ಸಮಗ್ರ ಮಾದರಿಯನ್ನು ರೂಪಿಸಬೇಕು” ಎಂದು ರಕ್ಷಿತ್ ಶಿವರಾಂ ಹೇಳಿದರು.
ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ರಾಮ್ ಪ್ರಸಾದ್ ಮನೋಹರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದ ಪ್ರಮುಖರು, ಉದ್ಯಮಿಗಳು ಹಾಗೂ ಹೂಡಿಕೆದಾರರು ಉಪಸ್ಥಿತರಿದ್ದರು.
ರಕ್ಷಿತ್ ಶಿವರಾಂ ಮಂಡಿಸಿದ ಬೇಡಿಕೆಗಳಿಗೆ ಸಚಿವ ಕೆ.ಜೆ. ಜಾರ್ಜ್ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೆಳ್ತಂಗಡಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳ ಕುರಿತು ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆ ಮೂಡಿದೆ.
