ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಮುಂಜಾನೆ ಜಿಎಸ್‌ಎಲ್ವಿ-ಎಫ್17 ರಾಕೆಟ್ ಮೂಲಕ ಭೂಸಮಕಾಲಿಕ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಮೊದಲ ಇಮೇಜಿಂಗ್ ಉಪಗ್ರಹ EOS-05 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
51.7 ಮೀಟರ್ ಎತ್ತರ ಹಾಗೂ 420.5 ಟನ್ ತೂಕದ ಮೂರು ಹಂತಗಳ ಈ ರಾಕೆಟ್, ಶ್ರೀಹರಿಕೋಟಾದ ಎರಡನೇ ಉಡಾವಣಾ ಕೇಂದ್ರದಿಂದ ಮುಂಜಾನೆ 2.55ಕ್ಕೆ ಗಗನಕ್ಕೆ ಚಿಮ್ಮಿತು. ಸುಮಾರು 2,367 ಕೆಜಿ ತೂಕದ ಈ ಭೂ ವೀಕ್ಷಣಾ ಉಪಗ್ರಹವನ್ನು ನಿಗದಿತ ಜಿಯೋಸಿಂಕ್ರೋನಸ್ ಟ್ರಾನ್ಸರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು
ಇದು ಜಿಎಸ್ಎಲ್‌ವಿ ರಾಕೆಟ್ ಸರಣಿಯ 19ನೇ ಹಾರಾಟವಾಗಿದೆ.
ಜಿಎಸ್‌ಎಲ್ವಿ-ಎಫ್17 ರಾಕೆಟ್ ನಲ್ಲಿ S139 ಸಾಲಿಡ್ ಕೋರ್, ನಾಲ್ಕು L40H ಲಿಕ್ವಿಡ್ ಸ್ಟ್ರಾಪ್-ಆನ್ಗಳು, GL40HT ಲಿಕ್ವಿಡ್ ಎರಡನೇ ಹಂತ ಹಾಗೂ ದೇಶೀಯವಾಗಿ ಅಭಿವೃದ್ಧಿಪಡಿಸಲಾದ CUS15 ಕ್ರಯೋಜೆನಿಕ್ ಮೇಲಿನ ಹಂತಗಳನ್ನು ಅಳವಡಿಸಲಾಗಿತ್ತು.
ಉಪಗ್ರಹವನ್ನು ಭೂಮಿಗೆ ಸಮೀಪದ 171 ಕಿ.ಮೀ. ಹಾಗೂ ಭೂಮಿಯಿಂದ ಗರಿಷ್ಠ 31,026 ಕಿ.ಮೀ. ದೂರವಿರುವ, 19.28 ಡಿಗ್ರಿ ಕೋನದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಉಪಗ್ರಹದಲ್ಲಿರುವ ಟ್ರಸ್ಟರ್ ಗಳ ಸಹಾಯದಿಂದ ಹಂತ ಹಂತವಾಗಿ ಅಂತಿಮ ಕಕ್ಷೆಗೆ ಕೊಂಡೊಯ್ಯಲಾಗುತ್ತದೆ.
ಉಡಾವಣೆಯ ನಂತರ ಮಿಷನ್ ಕಂಟ್ರೋಲ್ ಕೇಂದ್ರದಿಂದ ಮಾತನಾಡಿದ ಇಸ್ರೋ ಅಧ್ಯಕ್ಷ ವಿ. ನಾರಾಯಣನ್, ರಾಕೆಟ್ ಉಪಗ್ರಹವನ್ನು ನಿಖರವಾದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ ಎಂದು ತಿಳಿಸಿದರು.
“ಮೊದಲ ಜಿಎಸ್‌ಎಲ್ವಿ ಉಡಾವಣೆಯಲ್ಲಿ 1,536 ಕೆಜಿ ತೂಕದ ಪೇಲೋಡ್ ಅನ್ನು ಹೊತ್ತೊಯ್ದಿದ್ದ ರಾಕೆಟ್, ಇದೀಗ ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ತೂಕದ 2,367 ಕೆಜಿ ಪೇಲೋಡ್ ಅನ್ನು ಹೊತ್ತೊಯ್ದಿದೆ. ರಾಕೆಟ್ ನ ರಚನಾತ್ಮಕ ತೂಕವನ್ನು ಸರಿಹೊಂದಿಸುವುದು ಹಾಗೂ ಪ್ರೊಪಲ್ಸನ್ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಹಂತಹಂತವಾಗಿ ಇದರ ಸಾಮರ್ಥ್ಯವನ್ನು ಹೆಚ್ಚಿಸಿದ್ದೇವೆ. ಈ ಉಪಗ್ರಹವು ಭಾರತದ ಮೊದಲ ಭೂಸ್ಥಿರ ಇಮೇಜಿಂಗ್ ಉಪಗ್ರಹವಾಗಿದ್ದು, ವ್ಯೂಹಾತ್ಮಕ ದತ್ತಾಂಶಗಳನ್ನು ಒದಗಿಸಲಿದೆ” ಎಂದು ಇಸ್ರೋ ಅಧ್ಯಕ್ಷರು ವಿವರಿಸಿದರು.
ಇದೇ ಹಣಕಾಸು ವರ್ಷದಲ್ಲಿ ಇಸ್ರೋ ಇನ್ನೂ ಆರು ಉಡಾವಣೆಗಳನ್ನು ನಡೆಸಲಿದೆ ಎಂದು ಅವರು ಹೇಳಿದರು.










