ಬೆಳ್ತಂಗಡಿ: ಧರ್ಮಸ್ಥಳ- ಕೊಕ್ಕಡ ರಸ್ತೆಯ ಧರ್ಮಸ್ಥಳ ಸಮೀಪದ ಕಲ್ಲೇರಿ ಪರಿಸರದ ಪುದುವೆಟ್ಟು ಕ್ರಾಸ್ ಬಳಿ ಗುರುವಾರ ರಾತ್ರಿ ಕಾಡಾನೆಯೊಂದು ಕಾಣಿಸಿಕೊಂಡಿದ್ದು, ಸ್ಥಳೀಯರು ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ.
ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಾಡಾನೆ ಹೆದ್ದಾರಿ ಬದಿಯಲ್ಲಿ ಕಾಣಿಸಿಕೊಂಡಿದೆ. ರಸ್ತೆಯ ಸಮೀಪವೇ ಕಾಡಾನೆ ಸಂಚರಿಸುತ್ತಿರುವುದನ್ನು ಗಮನಿಸಿದ ವಾಹನ ಸವಾರರು ಕೆಲಕಾಲ ಆತಂಕಗೊಂಡಿದ್ದಾರೆ. ಕಾಡಾನೆ ರಸ್ತೆಯ ಬದಿಯಲ್ಲಿ ಕಾಣಿಸಿಕೊಂಡಿರುವ ದೃಶ್ಯವನ್ನು ಕೆಲವರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಆಗಾಗ ಕಂಡುಬರುತ್ತಿದ್ದು, ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದ ಇರುವ ಅಗತ್ಯವಿದೆ.
