ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ–ಗುರುವಾಯನಕೆರೆ ಭಜನಾ ಪರಿಷತ್ತಿನ ಸಭೆಯು ಸೆ. 3ರಂದು ಬೆಳ್ತಂಗಡಿಯ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ನಡೆಯಿತು.
ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತಿನ ಸ್ಥಾಪಕ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, “ಉತ್ತಮ ಸಂಸ್ಕಾರಕ್ಕೆ ಭಜನೆಯೇ ಮೂಲ” ಎಂದು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಪೂರ್ಣ ಸಹಕಾರ ಮತ್ತು ಪೂಜ್ಯರ ಮಾರ್ಗದರ್ಶನದೊಂದಿಗೆ ಗ್ರಾಮ ಗ್ರಾಮಗಳಲ್ಲಿ,ಮನೆ ಮನೆಗಳಲ್ಲಿ ಭಜನೆಯ ಮೂಲಕ ಸಂಸ್ಕಾರವನ್ನು ಬೆಳೆಸಿ ಪ್ರತಿಯೊಬ್ಬರೂ ಸಂಸ್ಕಾರಯುತ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.
ಪ್ರತಿ ಗ್ರಾಮದಲ್ಲಿಯೂ ಭಜನಾ ಮಂಡಳಿಗಳು ಸ್ಥಾಪನೆಯಾಗಿ,ಅವುಗಳ ಮೂಲಕ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು ಗ್ರಾಮಮಟ್ಟದಲ್ಲಿ ನಡೆಯುತ್ತಿರುವುದಕ್ಕೆ ಭಜನೆಯ ಸಂಸ್ಕಾರವೇ ಪ್ರಮುಖ ಕಾರಣವಾಗಿದೆ. ಭಜನೆಯಿಂದ ಎಂದಿಗೂ ವಿಭಜನೆ ಉಂಟಾಗುವುದಿಲ್ಲ; ಬದಲಾಗಿ ಭಜನೆ ಸಮಾಜವನ್ನು ಒಗ್ಗೂಡಿಸುವ ಶಕ್ತಿಯಾಗಿದೆ. ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಜನೆಯ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಂಸ್ಕಾರಯುತ ಬದುಕನ್ನು ನಡೆಸಬೇಕು ಎಂದು ಅವರು ಕರೆ ನೀಡಿದರು.
ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಚಂದ್ರಶೇಖರ್ ಕೊಯ್ಯೂರು ಮಾತನಾಡಿ,ವಲಯ ಮಟ್ಟದ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಭಜನಾ ಮಂಡಳಿಗಳನ್ನು ಮತ್ತಷ್ಟು ಬಲಪಡಿಸಬೇಕು.ಭಜನಾ ಪರಿಷತ್ತಿನ ಮೂಲಕ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಜನರಿಗೆ ಹೆಚ್ಚಿನ ಪ್ರಯೋಜನವಾಗುವಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಗುರುವಾಯನಕೆರೆ ಭಜನಾ ಪರಿಷತ್ತಿನ ಅಧ್ಯಕ್ಷರಾದ ಜಗದೀಶ್ ಮೈರ ಮಾತನಾಡಿ,ನೆಮ್ಮದಿಯ ಬದುಕಿಗೆ ಭಜನೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದೆ.ಭಜನೆಯು ಮನುಷ್ಯನಲ್ಲಿರುವ ಉತ್ತಮ ಗುಣಗಳನ್ನು ಬೆಳೆಸಿ,ಆತನನ್ನು ಸಂಸ್ಕಾರಯುತ ಜೀವನದತ್ತ ಕೊಂಡೊಯ್ಯುತ್ತದೆ ಎಂದು ಹೇಳಿದರು.
ಬೆಳ್ತಂಗಡಿ ಭಜನಾ ಪರಿಷತ್ತಿನ ಅಧ್ಯಕ್ಷರಾದ ರವಿರಾಜ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಭಜನಾ ಪರಿಷತ್ ಧರ್ಮಸ್ಥಳದ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಕುರಿತು ಮಾಹಿತಿ ನೀಡಿದರು.ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ಭಜನಾ ಕಮ್ಮಟ ನಡೆಯಲಿದ್ದು, ಸೆಪ್ಟೆಂಬರ್ 27ರಂದು ಮಧ್ಯಾಹ್ನ 2 ಗಂಟೆಯಿಂದ ನೋಂದಣಿ ಪ್ರಾರಂಭವಾಗಲಿದೆ. ಮಕ್ಕಳಲ್ಲಿ ಉತ್ತಮ ಗುಣನಡತೆ ಮತ್ತು ಸಂಸ್ಕಾರ ಬೆಳೆಸುವಲ್ಲಿ ಭಜನೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಜನಾ ಕಮ್ಮಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
SKDRDP ಬೆಳ್ತಂಗಡಿಯ ಯೋಜನಾಧಿಕಾರಿ ಯಶೋಧರ್ ಅವರು ಎಲ್ಲರನ್ನು ಸ್ವಾಗತಿಸಿದರು.
SKDRDP ಗುರುವಾಯನಕೆರೆಯ ಯೋಜನಾಧಿಕಾರಿ ಹರೀಶ್ ಅವರು ಧನ್ಯವಾದ ಸಮರ್ಪಿಸಿದರು.ಬೆಳ್ತಂಗಡಿ ತಾಲೂಕಿನ ಭಜನಾ ಪರಿಷತ್ತಿನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಇಂದಬೆಟ್ಟು ಹಾಗೂ ಗುರುವಾಯನಕೆರೆಯ ಭಜನಾ ಪರಿಷತ್ತಿನ ಕಾರ್ಯದರ್ಶಿ ಸಂದೇಶ್ ಮದ್ದಡ್ಕ ಅವರು ಕಾರ್ಯಕ್ರಮದ ಕಾರ್ಯಚಟುವಟಿಕೆಗಳ ಕುರಿತು ವರದಿ ಮಂಡಿಸಿದರು.
ವಲಯದ ಪದಾಧಿಕಾರಿಗಳಾದ ಹರೀಶ್ ಕುಮಾರ್ ಧರ್ಮಸ್ಥಳ,ಗಣೇಶ್ ಕಣ್ಣಾಜೆ ಬೆಳ್ತಂಗಡಿ,ಯಶೋಧರ್ ಸುವರ್ಣ, ಸೂರಜ್ ಮೇಲಂತಬೆಟ್ಟು,ಸಂತೋಷ್ ಕುತ್ಲೂರು,ಸಂಪತ್ ಕೆ. ಪೆರ್ಲ ಬೈಪಾಡಿ, ಸೋಮನಾಥ್ ಅಳದಂಗಡಿ,ಆನಂದ ಕೊಕ್ಕಡ,ಪುಷ್ಪವತಿ ಆರ್. ಶೆಟ್ಟಿ, ಮಹೇಶ್ ಅರಸಿನಮಕ್ಕಿ, ಕೃಷ್ಣಪ್ಪ ಗೌಡ ಅರಸಿನಮಕ್ಕಿ ಹಾಗೂ ಜನಾರ್ಧನ ಗೌಡ ಲಾಯಿಲ ಸೇರಿದಂತೆ ವಲಯ ಮಟ್ಟದ ಭಜನಾ ಪರಿಷತ್ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ವಿವಿಧ ಭಜನಾ ಮಂಡಳಿಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ರಾಮ್ ಕುಮಾರ್ ಮಾರ್ನಾಡ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
