ಬೆಳ್ತಂಗಡಿ; ದಲಿತ ಸಮುದಾಯದ ಕಾರ್ಯಚಟುವಟಿಕೆಗಳ ಭಾಗವಾಗಿ 1955 ರಲ್ಲಿ ವೇಣೂರಿನ ಹೃದಯಭಾಗದಲ್ಲಿ ನಿರ್ಮಾಣವಾಗಿದ್ದ ಸಮುದಾಯ ಭವನವನ್ನು ಕಾನೂನು ಬಾಹಿರವಾಗಿ ಸರ್ಕಾರದ ಸ್ವತ್ತು ಸಂಪೂರ್ಣ ನಾಶ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೇಣೂರು ಗ್ರಾಮದ ಸ.ನಂ 76/2A3 ಯಲ್ಲಿನ 0.06 ಎಕರೆ ಜಮೀನಿನಲ್ಲಿ 1955 ರಲ್ಲಿ ಅಂದಿನ ರಾಜ್ಯ ಸರ್ಕಾರ ದಲಿತ ಸಮುದಾಯದ ಕಾರ್ಯಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಸಮುದಾಯ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಸಚಿವ ಭಕ್ತವತ್ಸಲಂ ರವರು ದಿನಾಂಕ 22-04-1955 ರಲ್ಲಿ ಉದ್ಘಾಟಿಸಿದ್ದರು. ಈ ಸಮುದಾಯ ಭವನದಲ್ಲಿ ಸಭೆ , ಸಮಾರಂಭ , ಮದುವೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಸಮುದಾಯ ಭವನದ ಒಂದು ಬದಿಯಲ್ಲಿ ಮಂಡಲ ಪಂಚಾಯತ್ ಹಾಗೂ ಗ್ರಾಮಕರಣಿಕರ ಕಚೇರಿ ಕಾರ್ಯಚರಿಸುತ್ತಿತ್ತು. ಆದರೆ ಇದೀಗ ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಸಮಾಜ ಕಲ್ಯಾಣ ಇಲಾಖೆಯ ಪೂರ್ವಾನುಮತಿ ಇಲ್ಲದೆ ಏಕಪಕ್ಷೀಯ , ಕಾನೂನು ಬಾಹಿರವಾಗಿ ಸಮುದಾಯ ಭವನ ಕಟ್ಟಡವನ್ನು ಸಂಪೂರ್ಣ ಕೆಡವಿ ಹಾಕಲಾಗಿದೆ ಎಂದು ಆರೋಪಿಸಿ ದಸಂಸ (ಅಂಬೇಡ್ಕರ್ ವಾದ)ಬೆಳ್ತಂಗಡಿ ತಾಲೂಕು ಸಂಘಟನಾ ಸಂಚಾಲಕ ವಿಜಯ ಕುಮಾರ್ ಬಜಿರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರವರಿಗೆ ಮನವಿ ಸಲ್ಲಿಸಿದರು.
ಸಮುದಾಯ ಭವನವು ಸಾವಿರಾರು ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿ ದಲಿತ ಸಮುದಾಯದೊಂದಿಗೆ ಭಾವನಾತ್ಮಕ ಸಂಬಂಧವನ್ನು ಹೊಂದಿತ್ತು. ಇಂತಹ ಕಟ್ಟಡವನ್ನು ಸಂಪೂರ್ಣ ನಾಶಗೊಳಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಮಾತ್ರವಲ್ಲದೇ ದಲಿತ ಸಮುದಾಯದ ಅಸ್ಮಿತೆ , ಭಾವನೆಗೆ ಅವಮಾನ ಮಾಡಲಾಗಿದ್ದು , ತಪ್ಪಿತಸ್ಥ ಅಧಿಕಾರಿಗಳು ಸೇರಿದಂತೆ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
