ಮಂಗಳೂರು: ಈದ್ ಮಿಲಾದ್ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆಯ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಈ ಹಿಂದೆ ಆ.26ರಂದು ಬುಧವಾರ ಈದ್ ಮಿಲಾದ್ ಹಬ್ಬದ ಸಾರ್ವತ್ರಿಕ ರಜೆ ಘೋಷಿಸಲಾಗಿದ್ದರೂ, ಜಿಲ್ಲೆಯಲ್ಲಿ ಮಂಗಳವಾರ ಹಬ್ಬವನ್ನು ಆ.25ರಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಜೆಯನ್ನು ಒಂದು ದಿನ ಮುಂಚಿತವಾಗಿ ನೀಡಲು ಸರ್ಕಾರ ಆದೇಶಿಸಿದೆ.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ಕಾರ್ಯಾಲಯದಿಂದ ಆ.24ರಂದು ಈ ಕುರಿತು ಅಧಿಕೃತ ಜ್ಞಾಪನ ಹೊರಡಿಸಲಾಗಿದೆ.
2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿನ ಸರ್ಕಾರದ ಅಧಿಸೂಚನೆಯಂತೆ ಆ.26ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸಾರ್ವತ್ರಿಕ ರಜೆ ಘೋಷಿಸಲಾಗಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಆ.26ರ ಬುಧವಾರದ ಬದಲಾಗಿ ಆ.25ರ ಮಂಗಳವಾರದಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ರಜೆಯ ದಿನಾಂಕವನ್ನು ಬದಲಾಯಿಸುವಂತೆ ಜಿಲ್ಲಾಧಿಕಾರಿಯವರ ಕಚೇರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಪ್ರಸ್ತಾವನೆಯನ್ನು ಪರಿಗಣಿಸಿರುವ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆ.24ರಂದು ಹೊರಡಿಸಿರುವ ಆದೇಶದಂತೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ.26ರ ಬುಧವಾರದಂದು ಘೋಷಿಸಲಾಗಿದ್ದ ಸಾರ್ವತ್ರಿಕ ರಜೆಯನ್ನು ರದ್ದುಗೊಳಿಸಿ, ಅದರ ಬದಲಿಗೆ ಆ.25ರ ಮಂಗಳವಾರದಂದು ಸಾರ್ವತ್ರಿಕ ರಜೆ ಘೋಷಿಸಲಾಗಿದೆ.
ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆ.25ರಂದು ಮಂಗಳವಾರ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸರ್ಕಾರಿ ರಜೆ ಇರಲಿದೆ. ಆ.26ರ ಬುಧವಾರವನ್ನು ಕರ್ತವ್ಯದ ದಿನವೆಂದು ಪರಿಗಣಿಸಲು ಸೂಚಿಸಲಾಗಿದೆ.
