Home ಅಪರಾಧ ಲೋಕ ಪುತ್ತೂರು; ದರ್ಬೆ ಗಲಾಟೆ ಪ್ರಕರಣ: ಪ್ರತ್ಯೇಕ ಮೂರು ಪ್ರಕರಣ ದಾಖಲು; ಓರ್ವನ ಬಂಧನ

ಪುತ್ತೂರು; ದರ್ಬೆ ಗಲಾಟೆ ಪ್ರಕರಣ: ಪ್ರತ್ಯೇಕ ಮೂರು ಪ್ರಕರಣ ದಾಖಲು; ಓರ್ವನ ಬಂಧನ

0


ಪುತ್ತೂರು: ಪುತ್ತೂರು ನಗರದ ದರ್ಬೆ ಜಂಕ್ಷನ್‌ನಲ್ಲಿರುವ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ದಾಖಲಾತಿ ಹಾನಿಯಾದ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣದಲ್ಲಿ ಆರೋಪಿ‌ ಸುದರ್ಶನ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ದಾಖಲಾತಿ ಹಾನಿ ವಿಚಾರದಲ್ಲಿ ಗಲಾಟೆ


ಸುಳ್ಯ ಜಾಲ್ಸೂರು ನಿವಾಸಿ ಫಾತಿಮತ್ ಮಿಸ್ವಾನ (32) ಅವರು ನೀಡಿದ ದೂರಿನಂತೆ, ಆಗಸ್ಟ್ 21ರಂದು ತಮ್ಮ ಸಹೋದರ ಹಾಗೂ ತಂಗಿಯೊಂದಿಗೆ ಪುತ್ತೂರಿಗೆ ಬಂದಿದ್ದ ವೇಳೆ ದರ್ಬೆಯ ಡ್ರೀಮ್ ಡೆಸ್ಟಿನೇಶನ್ ಜನಸೇವಾ ಕೇಂದ್ರದಲ್ಲಿ ಕೆಲವು ದಾಖಲೆಗಳನ್ನು ಪ್ರಿಂಟ್ ಹಾಗೂ ಲ್ಯಾಮಿನೇಷನ್‌ಗಾಗಿ ನೀಡಿದ್ದರು. ಬಳಿಕ ದಾಖಲೆಗಳನ್ನು ಪಡೆಯಲು ತೆರಳಿದಾಗ ಒಂದು ದಾಖಲಾತಿ ಹಾನಿಯಾಗಿರುವುದು ಕಂಡುಬಂದಿದೆ.
ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ದಾಖಲಾತಿಯನ್ನು ಸರಿಪಡಿಸಿಕೊಡಬೇಕು ಅಥವಾ ಹೊಸ ದಾಖಲಾತಿ ಪಡೆಯಲು ₹300 ನೀಡಬೇಕು ಎಂದು ಕೇಳಿದಾಗ, ಕೇಂದ್ರದಲ್ಲಿದ್ದ ಅಂಜನಾ ಪೈ ಹಾಗೂ ಸುದರ್ಶನ ಪೈ ಅವರು ಅವಾಚ್ಯವಾಗಿ ಬೈದು, ಸುದರ್ಶನ ಪೈ ಅವರು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯ ಬಳಿಕ ಗಾಯಗೊಂಡವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ದೂರಿನ ಆಧಾರದ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ. 97/2026ರಂತೆ ಪ್ರಕರಣ ದಾಖಲಾಗಿದ್ದು, ಸುದರ್ಶನ ಪೈ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಸೆಪ್ಟೆಂಬರ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಜನಸೇವಾ ಕೇಂದ್ರದ ಮಾಲಕಿಯಿಂದ‌ ದೂರು

ಇದೇ ಘಟನೆಗೆ ಸಂಬಂಧಿಸಿ ಪುತ್ತೂರು ಕಸಬಾ ನಿವಾಸಿ ಅಂಜನಾ ಎಸ್. ಪೈ (50) ಅವರು ನೀಡಿದ ದೂರಿನ ಆಧಾರದ ಮೇಲೂ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಅವರ ದೂರಿನ ಪ್ರಕಾರ, ಜನಸೇವಾ ಕೇಂದ್ರದಲ್ಲಿ ಲ್ಯಾಮಿನೇಶನ್‌ಗೆ ನೀಡಲಾಗಿದ್ದ ದಾಖಲಾತಿಯೊಂದು ತಾಂತ್ರಿಕ ದೋಷದಿಂದ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಗಲಾಟೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಬ್ಬಂದಿಯಿಂದ ದೊರೆತ ಹಿನ್ನೆಲೆಯಲ್ಲಿ ಅವರು ಸ್ಥಳಕ್ಕೆ ಆಗಮಿಸಿದ್ದರು.
ಈ ವೇಳೆ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಗಲಾಟೆ ನಡೆಸುತ್ತಿದ್ದು, ದಾಖಲಾತಿಗಳನ್ನು ನೀಡಬೇಕು ಅಥವಾ ₹10,000 ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಸಮಾಧಾನಪಡಿಸಲು ಯತ್ನಿಸಿದ ವೇಳೆ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದು, ಮತ್ತೋರ್ವ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಫಾತಿಮತ್ ಮಿಸ್ವಾನ, ಮುಬಾಶಿರಾ, ಮುಬಾರಿಶ್ ಹಾಗೂ ನೌಶಾದ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಅ.ಕ್ರ. 98/2026ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು

ಇನ್ನು ದರ್ಬೆ ಜಂಕ್ಷನ್ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪುತ್ತೂರು ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಜನರನ್ನು ಚದುರಿಸುವ ವೇಳೆ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ
ಗಲಾಟೆಗೆ ಸಂಬಂಧಿಸಿದಂತೆ ಕೆಲವರನ್ನು ಠಾಣೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ನಿಯಾಝ್, ನೌಶಾದ್ ಸೇರಿದಂತೆ ಇತರರು ಪೊಲೀಸರನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 99/2026ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.

ಘಟನೆಯ ಹಿನ್ನೆಲೆಯಲ್ಲಿ ಗಲಾಟೆ, ಹಲ್ಲೆ, ಜೀವ ಬೆದರಿಕೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಗಳಿಗೆ ಸಂಬಂಧಿಸಿ ಒಟ್ಟು ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version