Home ಅಪರಾಧ ಲೋಕ ಸುಮಂತ್ ನಿಗೂಢ ಸಾವು ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಮಂಪರು ಪರೀಕ್ಷೆ.

ಸುಮಂತ್ ನಿಗೂಢ ಸಾವು ಪ್ರಕರಣ: ಸತ್ಯ ಬಯಲಿಗೆಳೆಯಲು ಕುಟುಂಬಸ್ಥರ ಬ್ರೈನ್ ಮ್ಯಾಪಿಂಗ್ ಮಂಪರು ಪರೀಕ್ಷೆ.

0

ಬೆಳ್ತಂಗಡಿ:ತಾಲೂಕಿನ ಗೇರುಕಟ್ಟೆ ಸಮೀಪದ ಸಂಭೋಳ್ಯದ ಬಾಲಕ ಸುಮಂತ್(15) ಸಂಶಯಾಸ್ಪದ ಸಾವಿನ ಪ್ರಕರಣದ ನಿಗೂಢತೆ ಹಾಗೂ ಸತ್ಯಾಸತ್ಯತೆ ಪತ್ತೆಹಚ್ಚುವ ನಿಟ್ಟಿನಲ್ಲಿ ನ್ಯಾಯಾಲಯದ ಪೂರ್ವಾನುಮತಿ ಪಡೆದು ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ ಎಸ್‌ ಎಲ್) ಬ್ರೈನ್ ಮ್ಯಾಪಿಂಗ್ ಹಾಗೂ ಮಂಪರು ಪರೀಕ್ಷೆ ಪ್ರಕ್ರಿಯೆ ಆರಂಭಿಸಲಾಗಿದೆ.

ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಕುಟುಂಬದ ಐವರನ್ನು ಈಗಾಗಲೇ ಬೆಂಗಳೂರಿನ ಎಫ್‌ ಎಸ್‌ ಎಲ್‌ ಗೆ ಕರೆದೊಯ್ದು ಮೊದಲ ಹಂತದ ತನಿಖೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಆ.10 ರಂದು, ಮೃತ ಸುಮಂತ್ ತಂದೆ ಸುಬ್ರಹ್ಮಣ್ಯ ನಾಯಕ್ ಹಾಗೂ ತಾಯಿ ರತ್ನಾವತಿ ಅವರನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪ್ರಶ್ನಿಸಲಾಯಿತು.
ಬಳಿಕ ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಂತ್ ಸಹೋದರ ಸುದರ್ಶನ್ ಅವರನ್ನು ಮಧ್ಯಾಹ್ನದಿಂದ ಸಂಜೆಯವರೆಗೆ ಪ್ರಶ್ನಿಸಲಾಯಿತು.
ಪೆರ್ಲದಲ್ಲಿ ಅರ್ಚಕರಾಗಿರುವ ರತ್ನಾವತಿ ಅವರ ಸಹೋದರ ರಾಧಾಕೃಷ್ಣ ಹಾಗೂ ಕಾಸರಗೋಡಿನ ಸಂಬಂಧಿ ಅಡುಗೆ ವೃತ್ತಿಯಲ್ಲಿರುವ ಲಕ್ಷ್ಮೀನಾರಾಯಣ ಅವರನ್ನು ಆ‌.11ರಂದು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.

ಈ ಐವರಿಂದ ಪಡೆದ ಉತ್ತರಗಳು ಹಾಗೂ ತನಿಖೆ ವೇಳೆ ದಾಖಲಾದ ಮಾಹಿತಿಯನ್ನು ತಾಳೆಹಾಕಿ ಪರಿಶೀಲಿಸುವ ಕಾರ್ಯವನ್ನು ಎಫ್ ಎಸ್ ಎಲ್ ತಜ್ಞರು ನಡೆಸುತ್ತಿದ್ದಾರೆ.
ಮುಂದಿನ ಹಂತದ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆಗಾಗಿ ಮತ್ತೆ ಹಾಜರಾಗುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.
ಅಲ್ಲದೆ ಕುಟುಂಬದ ಐವರ ಮೊದಲ ಹಂತದ ಪರೀಕ್ಷೆ ಹಾಗೂ ವಿಚಾರಣೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪ್ರಕರಣದಲ್ಲಿ ಗುರುತಿಸಲಾಗಿರುವ ಇತರ ಶಂಕಿತ ವ್ಯಕ್ತಿಗಳ ಮೇಲೂ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಿದೆ.
ಬಾಲಕನ ಸಾವು ಸಹಜವಲ್ಲ, ಆತನನ್ನು ವ್ಯವಸ್ಥಿತವಾಗಿ ಹತ್ಯೆ ಮಾಡಲಾಗಿದೆ ಎಂಬ ಅನುಮಾನಗಳು ಆರಂಭದಿಂದಲೇ ವ್ಯಕ್ತವಾಗಿದ್ದವು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ವಿಶೇಷ ತಂಡ ರಚಿಸಿ ಹಲವು ಆಯಾಮಗಳಲ್ಲಿ ತನಿಖೆ ನಡೆಸಿದರೂ ಈವರೆಗೆ ಪ್ರಕರಣದ ನಿಗೂಢತೆಗೆ ಸ್ಪಷ್ಟ ಉತ್ತರ ದೊರೆತಿರಲಿಲ್ಲ.
ಇದೀಗ ತನಿಖೆಯನ್ನು ಮತ್ತಷ್ಟು ವೈಜ್ಞಾನಿಕವಾಗಿ ಮುನ್ನಡೆಸಿರುವ ಪೊಲೀಸರು, ಹೇಳಿಕೆಗಳಲ್ಲಿನ ವ್ಯತ್ಯಾಸಗಳು ಹಾಗೂ ತನಿಖೆಯಿಂದ ಲಭ್ಯವಾಗಿರುವ ಮಾಹಿತಿಗಳನ್ನು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಪರಿಶೀಲಿಸುವ ಪ್ರಯತ್ನ ನಡೆಸಿದ್ದಾರೆ.
ಹೈಸ್ಕೂಲ್ ವಿದ್ಯಾರ್ಥಿ ಸುಮಂತ್ ಜ. 14ರಂದು ಬೆಳಗಿನ ಜಾವ ಸಮೀಪದ ದೇವಸ್ಥಾನಕ್ಕೆ ಧನು ಪೂಜೆಗಾಗಿ ತೆರಳುತ್ತಿದ್ದ ವೇಳೆ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ. ಮನೆ ಸಮೀಪದ ಕೆರೆಯಲ್ಲಿ ಶವ ಪತ್ತೆಯಾಗಿತ್ತು ಹಲವು ಅನುಮಾನಗಳನ್ನು ಹೊಂದಿರುವ ಈ ಸಂಶಯಾಸ್ಪದ ಸಾವಿನ ಪ್ರಕರಣ ಬಯಲಿಗೆಳೆಯಲು ಪೊಲೀಸ್ ಇಲಾಖೆ ಹರಸಾಹಸ ಪಟ್ಟರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದೆ ನಿಗೂಢವಾಗಿಯೇ ಮುಂದುವರಿದಿರುವ ಹಿನ್ನೆಲೆಯಲ್ಲಿ ಮಂಪರು ಪರೀಕ್ಷೆ ಪ್ರಯೋಗ ನಡೆಸಲಾಗುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version