ಬೆಳ್ತಂಗಡಿ. ಇ-ಸ್ವತ್ತು ತಂತ್ರಾಂಶದಲ್ಲಿ ||ಎ ಮತ್ತು 11ಬಿ ತಿದ್ದುಪಡಿಯಲ್ಲಿ ಸರ್ವೆ ನಂಬರ್ ಮತ್ತು ಮಾಲೀಕರ ವಿವರವನ್ನು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಯವರ ಅನುಮೋದನೆ ಪಡೆದು ಪಂಚಾಯತಿ ಅಭಿವೃದ್ಧಿ ಅಧಿಕಾರಿಯವರ ಲಾಗಿನ್ ನಲ್ಲಿ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿತ್ತು.
ಪ್ರಸ್ತುತ ತಂತ್ರಾಂಶದಲ್ಲಿ ಸರ್ವೆ ನಂಬರ್ ಮತ್ತು ಮಾಲೀಕರ ವಿವರ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿ ಜಮೀನನ್ನು ಭೂಪರಿವರ್ತನೆಗೊಳಿಸಿ ವಿನ್ಯಾಸ ಅನುಮೋದನೆ ಪಡೆದು ಮೂಲ ಸರ್ವೆ ನಂಬರ್ ನಮೂದಿಸಿ ನಮೂನೆ 11ಎ ಮತ್ತು 11ಬಿ ನೀಡಲಾಗುತ್ತಿದೆ. ಆದರೆ, ಭೂ ಪರಿವರ್ತನೆ ನಂತರ ಪೋಡಿಯಾಗಿ ಸೃಜಿಸಲಾದ ಹೊಸ ಸರ್ವೆ ನಂಬರನ್ನು ದಾಖಲಿಸಲು ಮತ್ತು ತಪ್ಪಾಗಿ ನಮೂದಿಸಲಾದ ಮಾಲೀಕರ ವಿವರಗಳನ್ನು ತಿದ್ದುಪಡಿ ಮಾಡಲು ಇ-ಸ್ವತ್ತು ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲು ಕೋರಿದೆ. ಈ ತರಹದ ಹಲವು ಪ್ರಕರಣಗಳು ಬಾಕಿಯಿದ್ದು, ಇದರಿಂದ ಸಾರ್ವಜನಿಕರಿಗೆ ಆಸ್ತಿ ನೋಂದಣೆಗೆ, ಮಾರಾಟಕ್ಕೆ, ಬ್ಯಾಂಕ್ ಸಾಲ ಇನ್ನಿತರ ಸೌಲಭ್ಯಗಳಿಗೆ ತೀರಾ ಆಡಚಣೆಯಾಗಿರುತ್ತದೆ.
ಈ ಕುರಿತಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿ ಇ-ಸ್ವತ್ತು ತಂತ್ರಾಂಶದಲ್ಲಿ ಸರ್ವೆ ನಂಬರ್ ಮತ್ತು ಮಾಲೀಕರ ವಿವರಗಳ ತಿದ್ದುಪಡಿಗೆ ಶೀಘ್ರದಲ್ಲಿ ಅವಕಾಶ ಕಲ್ಪಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿಯಲ್ಲಿ ತಿಳಿಸಿದರು ಈ ಸಂದರ್ಭದಲ್ಲಿ. ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಸಮಿತಿ ಅಧ್ಯಕ್ಷರಾದ ಸತೀಶ್ ಕೆ ಕಾಶಿಪಟ್ಟಣ ಉಪಸ್ಥಿತರಿದ್ದರು.
