“ಬಂಜೆತನ ಪತಿ- ಪತ್ನಿ ಇಬ್ಬರಿಗೂ ಸಂಬಂಧಿಸಿದ ಸಮಸ್ಯೆ” – ಡಾ. ಗೋಪಾಲಕೃಷ್ಣ ಕೆ.
ಬೆಳ್ತಂಗಡಿ; NABH ಪುರಸ್ಕೃತ ಉಜಿರೆ ಬೆನಕ ಹೆಲ್ತ್ ಸೆಂಟರ್, ಬೆನಕ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಆನ್ಸ್ ಕ್ಲಬ್ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಉಜಿರೆಯ ಬೆನಕ ಹೆಲ್ತ್ ಸೆಂಟರ್‌ನಲ್ಲಿ ಉಚಿತ ಬಂಜೆತನ ನಿವಾರಣಾ ಶಿಬಿರ ಇತ್ತೀಚಿಗೆ ನಡೆಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿ ಸಿ ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ರೋ. ಶ್ರೀಧರ್ ಕೆ.ವಿ. ಇವರು ಮಾತನಾಡಿ, ಬಂಜೆತನದ ಕುರಿತು ಸಮಾಜದಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಅಗತ್ಯವಿದೆ. ಸೂಕ್ತ ಸಮಯದಲ್ಲಿ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಪಡೆಯುವುದರಿಂದ ಅನೇಕ ದಂಪತಿಗಳಿಗೆ ಸಂತಾನದ ಕನಸು ನನಸಾಗಲು ಸಾಧ್ಯವಿದೆ. ಇಂತಹ ಉಚಿತ ಶಿಬಿರಗಳು ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ಮಾರ್ಗದರ್ಶನ ಒದಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಕೆ. ಅವರು, ಬಂಜೆತನವು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ ಸಮಸ್ಯೆಯಲ್ಲ. ಪುರುಷರು ಮತ್ತು ಮಹಿಳೆಯರಿಬ್ಬರಲ್ಲಿಯೂ ವಿವಿಧ ಕಾರಣಗಳಿಂದ ಬಂಜೆತನ ಉಂಟಾಗಬಹುದು. ಸೂಕ್ತ ತಪಾಸಣೆಯ ಮೂಲಕ ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಿ, ವೈಜ್ಞಾನಿಕವಾಗಿ ಅಗತ್ಯ ಚಿಕಿತ್ಸೆಯನ್ನು ಪಡೆಯುವುದು ಮುಖ್ಯ ಈ ಮೂಲಕ ತಮ್ಮ ಮಗುವನ್ನು ಪಡೆಯಬೇಕೆಂಬ ಕನಸನ್ನು ನನಸಾಗಿಸಲು ಸಾಧ್ಯವೆಂದು ತಿಳಿಸಿದರು .
ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಮತ್ತು ಐ.ವಿ.ಎಫ್. ಸ್ಪೆಷಲಿಸ್ಟ್ ಡಾ. ನವ್ಯಾ ಭಟ್ ಅವರು ಬಂಜೆತನದ ಕುರಿತು ವೈದ್ಯಕೀಯ ಹಾಗೂ ವೈಜ್ಞಾನಿಕ ಮಾಹಿತಿ ನೀಡಿದರು. ಮಹಿಳೆಯರಲ್ಲಿ ಅಂಡೋತ್ಪತ್ತಿಯ ಸಮಸ್ಯೆ, ಪಿಸಿಓಎಸ್, ಎಂಡೊಮೆಟ್ರಿಯಾಸಿಸ್ ಹಾಗೂ ಫಾಲೋಪಿಯನ್ ಟ್ಯೂಬ್‌ಗಳ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ಬಂಜೆತನ ಉಂಟಾಗಬಹುದು. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ, ಚಲನೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕಾರಣವಾಗಬಹುದು ಎಂದು ವಿವರಿಸಿದರು.
ಇಂದಿನ ವೈದ್ಯಕೀಯ ವಿಜ್ಞಾನದಲ್ಲಿ ಬಂಜೆತನಕ್ಕೆ ಹಲವು ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಅಗತ್ಯವಿದ್ದಲ್ಲಿ ಐಯುಐ ಹಾಗೂ ಐವಿಎಫ್‌ನಂತಹ ಸಹಾಯಕ ಸಂತಾನೋತ್ಪತ್ತಿ ಚಿಕಿತ್ಸಾ ವಿಧಾನಗಳನ್ನು ಬಳಸಬಹುದು. ಪ್ರತಿಯೊಬ್ಬ ದಂಪತಿಯ ಸಮಸ್ಯೆಯೂ ವಿಭಿನ್ನವಾಗಿರುವುದರಿಂದ ತಜ್ಞ ವೈದ್ಯರ ಸಲಹೆಯೊಂದಿಗೆ ಸೂಕ್ತ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಡಾ. ನವ್ಯಾ ಭಟ್ ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿರಿದ್ದ ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ನ ಅಧ್ಯಕ್ಷೆ ಶ್ರೀಮತಿ ರಾಜಶ್ರೀ ಧನಂಜಯರವರು ಈ ಕಾರ್ಯಕ್ರಮವು ಔಚಿತ್ಯ ಪೂರ್ಣವಾಗಿದ್ದು ,ಅತ್ಯಂತ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು .
ವಂದನಾರ್ಪಣೆಯನ್ನು ಡಾ ಭಾರತಿ ಜಿ ಕೆ ಇವರು ನೆರವೇರಿಸಿದ ಕಾರ್ಯಕ್ರಮದಲ್ಲಿ ಡಾ.ಅಂಕಿತ ಜಿ ಭಟ್ , ಡಾ.ಗೋವಿಂದ ಕಿಶೋರ್, ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ಡಾ.ರಾಘವೇಂದ್ರ ಪಿದಮಲೆ , ಡಾ.ಆಶಾ , ಬೆನಕ ಆಸ್ಪತ್ರೆ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು .










