
ಬೆಳ್ತಂಗಡಿ; ಮಲೆನಾಡಿನ ಸಾವಿರಾರು ರೈತರ ಬದುಕನ್ನು ಬೀದಿಪಾಲು ಮಾಡುವ ದುರುದ್ದೇಶ ಹೊಂದಿರುವ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಹೊರಟ ಕೇಂದ್ರ ಸರಕಾರದ ನಿರ್ಧಾರ ರೈತ ವಿರೋದಿಯಾಗಿದೆ ವರದಿ ಜಾರಿ ಮಾಡುವುದನ್ನು ಸರಕಾರ ಕೂಡಲೇ ಕೈಬಿಡಬೇಕು ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಒತ್ತಾಯಿಸಿದ್ದಾರೆ.
ಡಾ, ಕಸ್ತೂರಿ ರಂಗನ್ ವರದಿಯನ್ನು ಮತ್ತೆ ಜಾರಿ ಮಾಡಲು ಹೊಸ ನೋಟಿಫಿಕೇಶನ್ ಹೊರಡಿಸಿರುವ ಕೇಂದ್ರದ ಬಿಜೆಪಿ ಸರಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎನ್ನವುದು ಸಾಬೀತಾಗುತ್ತಿದೆ, ಪರಿಸರ ರಕ್ಷಣೆ, ಅರಣ್ಯ ರಕ್ಷಣೆ, ಕಾಡು ಪ್ರಾಣಿಗಳ ರಕ್ಷಣೆಗೆ ಎಂದು ಹೇಳುತ್ತಾ ಕಾರ್ಪರೇಟ್‌ಗಳ ಹಿತ ಕಾಪಾಡಲು ಮುಂದಾಗಿರುವ ಈ ವರದಿ ರೈತರ ಬದುಕಿಗೆ ಸಂಚಕಾರವನ್ನುಂಟು ಮಾಡಲಿದೆ ಎಂದರು. 2014 ರಲ್ಲಿ ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಸ್ತೂರಿ ರಂಗನ್ ವರದಿ ತಿರಸ್ಕರಿಸುವ ಮತ್ತು ರೈತರ ಪರ ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಭರವಸೆ ನೀಡಿ ಗೆದ್ದು ಅದಿಕಾರಕ್ಕೆ ಬಂದಿತ್ತು ಆದರೆ ಅಧಿಕಾರಕ್ಕೆ ಬಂದಬಳಿಕ ವರದಿ ಜಾರಿ ಮುಂದಾಗಿದೆ , ಅರಣ್ಯವಾಸಿ ರೈತರಿಗೆ ತನ್ನ ಕೃಷಿ ಭೂಮಿಯ ಹಕ್ಕು ಪತ್ರ ಸಿಗಲು ಅರಣ್ಯ ಹಕ್ಕು ಕಾಯ್ದೆ 2006 ರಲ್ಲಿ ವಿಧಿಸಿದ 3 ತಲೆ ಮಾರಿನ ಹಿಂದಿನ ಪುರಾವೆ ಒದಗಿಸಬೇಕೆಂಬ ನಿರ್ಬಂಧವನ್ನು ತೆಗೆದು ಆದಿವಾಸಿಗಳಿಗೆ ಅವಕಾಶ ನೀಡಿದಂತೆ 2005 ರ ತನಕ ವಾಸ ಇದ್ದ ಎಲ್ಲಾ ಅರಣ್ಯವಾಸಿ ರೈತರಿಗೆ ಹಕ್ಕುಪತ್ರ ನೀಡಲಾಗುವುದು ಎಂಬ ತಿದ್ದುಪಡಿಯನ್ನು ಮಾಡಬೇಕು ಎಂಬ ಸಿಪಿಐಎಂ ನ ಬೇಡಿಕೆಯನ್ನು ಇನ್ನೂ ಕೇಂದ್ರ ಸರಕಾರ ಈಡೇರಿಸಿಲ್ಲ ಎಂದರು. ಆದರೆ ಇದೀಗ ಕಸ್ತೂರಿ ರಂಗನ್ ವರದಿ ಜಾರಿ ಮಾಡುತ್ತಾ ಬಡ ರೈತರನ್ನು ಒಕ್ಕಲೆಬ್ಬಿಸಲು ಹುನ್ನಾರ ನಡೆಸಿದಂತೆ ಕಾಣುತ್ತಿದೆ ಎಂದ ಅವರು ಬೆಳ್ತಂಗಡಿ ತಾಲೂಕಿನ ರೈತರು ವಾಸಿಸುವ ಪ್ರದೇಶವನ್ನು ಕಸ್ತೂರಿ ರಂಗನ್ ವರದಿ ಜಾರಿ ವ್ಯಾಪ್ತಿಯಿಂದ ಹೊರಗಿಡಬೇಕು ಎಂದು ಆಗ್ರಹಿಸಿ ಮುಂದಿನ ದಿನಗಳಲ್ಲಿ ಸಿಪಿಐಎಂ ಪಕ್ಷ ಹೋರಾಟ ನಡೆಸಲಿದೆ ಎಂದರು. ರೈತರ ಪರವಾಗಿ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಲ್ಲಿ ಮತ್ತು ಕಸ್ತೂರಿ ರಂಗನ್ ವರದಿ ಜಾರಿ ಮಾಡಬೇಡಿ ಎಂದು ಪ್ರಧಾನಿಯವರನ್ನು ಒಪ್ಪಿಸುವಲ್ಲಿ ನಮ್ಮ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ಗೆದ್ದು ಬಂದ ಎಂ.ಪಿ. ಮತ್ತು ಎಂಎಲ್.ಎ. ಗಳು ಕೂಡಾ ವಿಫಲರಾಗಿದ್ದಾರೆ ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳು ಈಬಗ್ಗೆ ಕೇಂದ್ರ ಸರಕಾರದ ಗಮನಸೆಳೆಯಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯ ಸರಕಾರವೂ ತನ್ನ ಈ ಹಿಂದಿನ ನಿರ್ಧಾರಕ್ಕೆ ಬದ್ದರಿದ್ದು, ರೈತರ ರಕ್ಷಣೆಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲು ಮುಂದೆ ಬರಬೇಕಿದೆ ಮತ್ತು ರಾಜ್ಯದ ಕಾಂಗ್ರೇಸ್ ಎಂಪಿಗಳ ಮೂಲಕ ಲೋಕಸಭೆಯಲ್ಲೂ ಧ್ವನಿ ಎತ್ತುವಂತೆ ಮಾಡಬೇಕಿದೆ ಎಂದರು. ಕೇಂದ್ರ ಸರಕಾರ ಸರ್ವಾದಿಕಾರಿಯಾಗಿ ಬಡ ಅರಣ್ಯವಾಸಿ ರೈತರ ವಿರುದ್ದವಾಗಿ ಮುನ್ನಡೆಯಲು ಮುಂದಾದರೆ ತಾಲೂಕಿನ ಸಂತ್ರಸ್ಥ ರೈತರು ನಿರ್ಣಾಯಕ ಹೋರಾಟ ನಡೆಸಲು ಮುಂದೆ ಬರಬೇಕು ಎಂದು ಸಿಪಿಐಎಂ ಕರೆ ನೀಡುತ್ತದೆ ಎಂದು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.










