
ಬೆಳ್ತಂಗಡಿ : ನಗರದ ಜೈನ್ ಪೇಟೆ ಸಮೀಪ ಮಾದಕವಸ್ತು ಸೇವಿಸಿ ಅನುಮಾನಾಸ್ಪದವಾಗಿ ಕುಳಿತಿದ್ದ ಮಾದಕ ವಸ್ತು ಸಾಗಾಟದ ಪ್ರಕರಣದಲ್ಲಿತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ
ಬಂಧಿತ ಆರೋಪಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ನಿವಾಸಿ ಮಹಮ್ಮದ್ ನೌಶಾದ್ (29) ಎಂಬಾತನಾಗಿದ್ದಾನೆ ಗಾಂಜಾ ಮಾರಾಟ ಹಾಗೂ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಈತನ ವಿರುದ್ದ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆಯಲ್ಲಿ ವಾರೆಂಟ್ ಜಾರಿಯಾಗಿತ್ತು. ಈತನಿಗೆ ಗಾಂಜಾ ಪೂರೈಕೆ ಮಾಡಿರುವ ಹಮ್ಜತ್ ಖರಾರ್, ಲತೀಫ್ ಹಾಗೂ ಸಿದ್ದೀಕ್ ಅವರ ವಿರುದ್ದವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಅಟೋರಿಕ್ಷಾವೊಂದನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಸಿಕಂದರ್ ಪಾಷಾ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಆ.3 ರಂದು ಸಂಜೆ ಸುಮಾರು 6:45 ಗಂಟೆಗೆ ಬೆಳ್ತಂಗಡಿ ತಾಲೂಕು ಕಸಬಾ ಗ್ರಾಮದ ಜೈನ್ ಪೇಟೆ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಲ್ಲಿಸಿದ್ದ KA-70-9065 ಸಂಖ್ಯೆಯ ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ ಆಟೋದಲ್ಲಿದ್ದ ವ್ಯಕ್ತಿಯೊಬ್ಬರು ಅಮಲಿನಲ್ಲಿರುವುದು ಕಂಡುಬಂದಿರುತ್ತಾನೆ.
ವಿಚಾರಣೆ ನಡೆಸಿದಾಗ ಆತನ ಹೆಸರು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ನಿವಾಸಿ ಮಹಮ್ಮದ್ ನೌಶಾದ್ (29) ಎಂಬುವುದಾಗಿ ತಿಳಿಸಿದ್ದು ಅಲ್ಲದೆ ಬೆಳ್ತಂಗಡಿ ತಾಲೂಕಿನ ನಟೋರಿಯಾಸ್ ಮಾದಕವಸ್ತು ಸಾಗಾಟ ಮತ್ತು ಮಾರಾಟಗಾರನಾದ ಹಮ್ಜತ್ ಖರಾರ್, ಲತೀಫ್ ಹಾಗೂ ಸಿದ್ದೀಕ್ ಅವರು ಮಾದಕ ವಸ್ತುವನ್ನು ತಲಾ ಒಂದು ಗ್ರಾಂ ಪ್ಯಾಕೆಟ್‌ಗಳಲ್ಲಿ ನೀಡಿ ಪ್ರತಿ ಗ್ರಾಂಗೆ 2 ಸಾವಿರದಂತೆ ಮಾರಾಟ ಮಾಡಲು ತನ್ನ ಬಳಿ ನೀಡುತ್ತಿದ್ದು, ಆಟೋ ರಿಕ್ಷಾದ ಮೂಲಕ ಗಿರಾಕಿಗಳಿಗೆ ಸಾಗಿಸಿ ಮಾರಾಟ ಮಾಡುತ್ತಿರುವುದಾಗಿ ಹಾಗೂ ಇದೇ ದಿನ ಅವರು ನೀಡಿದ್ದ ಮಾದಕ ವಸ್ತುವನ್ನು ತಾನು ಸೇವಿಸಿರುವುದಾಗಿ ತಿಳಿಸಿದ್ದಾನೆ.
ಬಳಿಕ ಮಹಮ್ಮದ್ ನೌಶಾದ್ ನನ್ನು ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆರೋಪಿ THC-Marujuana ಮತ್ತು AMP- Amphetamine ನನ್ನು ಸೇವಿಸಿರುವುದನ್ನು ದೃಢಪಡಿಸಿ ಪ್ರಮಾಣಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾದಕ ವಸ್ತು ಸೇವನೆ ಹಾಗೂ ಮಾರಾಟದಲ್ಲಿ ತೊಡಗಿದ್ದ ಆರೋಪದಡಿ ಮಹಮ್ಮದ್ ನೌಶಾದ್ ಹಾಗೂ ಆರೋಪಿತನಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಸಹೋದರರಾದ ಹಮ್ಜತ್ ಖರಾರ್, ಲತೀಫ್ ಮತ್ತು ಸಿದ್ದೀಕ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆ.3 ರಂದು ಎನ್‌ಡಿಪಿಎಸ್ ಕಾಯ್ದೆ ಕಲಂ 27(b), 22(a) ಹಾಗೂ 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಾರಂಟ್ ನಲ್ಲಿ ಬಂಧನ: ಮಹಮ್ಮದ್ ನೌಷದ್ ವಿರುದ್ಧ ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 03-01-2026 ರಂದು ಕುವೆಟ್ಟು ಗ್ರಾಮದಲ್ಲಿ ಪತ್ತೆಯಾದ ಎಮ್.ಡಿ.ಎಮ್.ಎ ಮಾದಕವಸ್ತು ಮಾರಾಟ ಹಾಗೂ ಸಾಗಾಟ ಮಾಡಿದ ಪ್ರಕರಣ ದಾಖಲಾಗಿದ್ದು .ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ಬಂಧನದ ವಾರಂಟ್ ಕೂಡ ಜಾರಿ ಮಾಡಿದ್ದರು. ಈ ವಾರಂಟ್ ಪ್ರಕರಣದಲ್ಲಿ ಬೆಳ್ತಂಗಡಿ ಪೊಲೀಸರು ಆರೋಪಿ ಮಹಮ್ಮದ್ ನೌಷದ್ ನನ್ನು ಬಂಧಿಸಿದ್ದು ಈತನನ್ನು ಆ.4 ರಂದು ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.




