Home ರಾಜಕೀಯ ಸಮಾಚಾರ ಗೃಹಜ್ಯೋತಿ ಯೋಜನೆ: ಉಳಿದ ಅರ್ಹ ಫಲಾನುಭವಿಗಳು ಶೀಘ್ರವೇ ಅರ್ಜಿ ಸಲ್ಲಿಸಿ – ಬಿ. ಪದ್ಮನಾಭ ಸಾಲ್ಯಾನ್

ಗೃಹಜ್ಯೋತಿ ಯೋಜನೆ: ಉಳಿದ ಅರ್ಹ ಫಲಾನುಭವಿಗಳು ಶೀಘ್ರವೇ ಅರ್ಜಿ ಸಲ್ಲಿಸಿ – ಬಿ. ಪದ್ಮನಾಭ ಸಾಲ್ಯಾನ್

2
0

ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜಾರಿಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಹೆಚ್ಚುವರಿ ಮಾಹಿತಿ ಸಂಗ್ರಹಣೆ ಕಾರ್ಯವು ಬೆಳ್ತಂಗಡಿ ತಾಲೂಕಿನಲ್ಲಿ ಮುಂದುವರಿದಿದೆ.

ತಾಲೂಕಿನಾದ್ಯಂತ ಮನೆ ಮನೆಗೆ ಭೇಟಿ ನೀಡಿ ಫಲಾನುಭವಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಮಳೆಗಾಲದ ಹಿನ್ನೆಲೆಯಲ್ಲಿ ಹಲವಾರು ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿರುವುದರಿಂದ, ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮೆಸ್ಕಾಂ ಹಾಗೂ ಗ್ರಾಮ ಪಂಚಾಯಿತಿ ಆಡಳಿತದ ಸಮನ್ವಯದಲ್ಲಿ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ.

ಈಗಾಗಲೇ ಒಟ್ಟು 73,068 ಅರ್ಹ ಫಲಾನುಭವಿಗಳ ಪೈಕಿ ಸುಮಾರು 56,000 ಅರ್ಜಿಗಳು ನೋಂದಣಿಯಾಗಿವೆ. ಉಳಿದಿರುವ ಅರ್ಹ ಫಲಾನುಭವಿಗಳು ಅಗತ್ಯ ದಾಖಲೆಗಳೊಂದಿಗೆ ಕೂಡಲೇ ತಮ್ಮ ಅರ್ಜಿಯನ್ನು ನೋಂದಾಯಿಸಿಕೊಳ್ಳುವಂತೆ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ. ಪದ್ಮನಾಭ ಸಾಲ್ಯಾನ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಮನೆ ಮನೆಗೆ ಭೇಟಿ ಕಾರ್ಯಕ್ರಮ ಮುಂದುವರಿಯಲಿದ್ದು, ನೆಟ್ವರ್ಕ್ ಸಮಸ್ಯೆ ಇರುವ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ವಿಶೇಷ ನೋಂದಣಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ, ತಾಂತ್ರಿಕ ಸಮಸ್ಯೆಯಿಂದ “Data Not Found” ಎಂದು ತೋರಿಸುತ್ತಿರುವ ಫಲಾನುಭವಿಗಳ ಅರ್ಜಿಗಳ ಕುರಿತು ಸರ್ಕಾರದ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here