
ಬೆಳ್ತಂಗಡಿ; ಕೇಂದ್ರ ಸರಕಾರ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಆಟ ಆಡಿದ ಹಾಗೂ ನ್ಯಾಯುತವಾಗಿ ಶಾಂತಿಯುತವಾಗಿ ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳಬೇಡಿಕೆ ಈಡೇರಿಸಲು ಯೋಗ್ಯತೆ ಇಲ್ಲದೆ ವಿದ್ಯಾರ್ಥಿಗಳ ಮೇಲಿನ ಕೇಂದ್ರ ಸರಕಾರದ ಗೂಂಡಾಗಿರಿಯನ್ನು ನಾವು ಎಂದಿಗೂ ಸಹಿಸಲಾರೆವು ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಹೇಳಿದ್ದಾರೆ.
ಅವರು ಇಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಆಡಳಿ ಸೌಧ ಎದುರು ದೆಹಲಿಯ ಪೋಲೀಸ್ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. ನೀಟ್ ಪರಿಕ್ಷೆಯ ಅವ್ಯವಹಾರ, ಪ್ರಶ್ನೆ ಪತ್ರಿಕೆ ಬಹಿರಂಗ, ಇತ್ಯಾದಿಗಳಿಂದ ಹತಾಶರಾದ ಮಕ್ಕಳ ಆತ್ಮಹತ್ಯೆ ಪ್ರಕರಣ ಮೊದಲಾದ ವಿಚಾರಗಳಿಗೆ ಕಾರಣರಾದ ಮಾನವ ಸಂಪನ್ಮೂಲ ಸಚಿವರಾದ ಧರ್ಮೇಂದ್ರ ಪ್ರಧಾನ ಅವರು ನೈತಿಕ ಜವಬ್ದಾರಿ ಹೊತ್ತು ತಮ್ಮ ಹುದ್ದೆಗೆ ರಾಜಿನಾಮೆ ನೀಡಬೇಕು, ಆತ್ಮಹತ್ಯಗೆ ಬಲಿಯಾದ ಮಕ್ಕಳ ಕುಟುಂಬಗಳಿಗೆ ತಲಾ ಒಂದು ಕೊಟಿ ಪರಿಹಾರ ಕೊಡಬೇಕು, ಹಾಗೂ ನೀಟ್ ಪರೀಕ್ಷೆಯನ್ನು ಸಿಇಟಿಗೆ ಬದಲಾಯಿಸಬೇಕು ಎಂಬ ವಿದ್ಯಾರ್ಥಿಗಳಬೇಡಿಕೆ ಈಡೇರಿಸಲಾಗದ ಕೇಂದ್ರದ ನರೇಂದ್ರ ಮೋದಿ ಸರಕಾರ ರಾಜಿನಾಮೆ ನೀಡಬೇಕು ಎಂದರು. ಭಾವಿ ಜನಾಂಗದ ಮುಗ್ದ ಮಕ್ಕಳ ಮೇಲೆ ಹಲ್ಲೆ ನಡೆಸಿದ ಕೇಂದ್ರ ನರೇಂದ್ರ ಮೋದಿ ಪ್ರಾಯೋಜಿತ ಪೋಲೀಸರ ಮೂಲಕ ಮಾತ್ರವಲ್ಲ ತನ್ನ ಬಿಜೆಪಿ ಗೂಂಡಾಗಳಿಂದಲೂ ಮಾನ ಸಂಪನ್ಮೂಲವಾದ ಮಕ್ಕಳ ಮೇಲೆ ಹಲ್ಲೆ ನಡೆಸಿದವರು ರಾಮಮಂದಿರದಲ್ಲಿ ಸಾವಿರಾರು ಕೋಟಿ ರೂ ಲೂಟಿ ಮಾಡದೇ ಇದ್ದಾರೆಯೇ? ನ್ಯಾಯುತ ಹೋರಾಟಗಾರರನ್ನು, ದೇಶದ್ರೋಹಿಗಳೆಂದು ಹೇಳುವ ಬಿಜೆಪಿಯವರು ಹಿಂದು ಧರ್ಮದ ವಿರೋದಿಗಳೂ, ದೇಶ ವಿರೋದಿಗಳು ಮತ್ತು ರಾಷ್ಟ್ರ ವಿರೋದಿಗಳಾಗಿದ್ದಾರೆ ಎಂದರು.
ಸಿಪಿಐಎಂ ತಾಲೂಕು ಸಮಿತಿ ಸದಸ್ಯರಾದ ಶ್ಯಾಮರಾಜ್ ಪಟ್ರಮೆ ಮಾತನಾಡಿ ದೇಶದ ಮುಂದಿನ ಭವಿಷ್ಯಗಳಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ ಕೇಂದ್ರ ಸರಕಾರವು ನಮ್ಮ ದೇಶನ್ನು ಆಳುವ ಅರ್ಹತೆಯನ್ನು ಕಳಕೊಂಡಿದೆ ಎಂದರು. ನಿಮ್ಮ ಲಾಠಿ ಗುಂಡಿಗೆ ಹೆದರುವುದಿಲ್ಲ ಎಂದ ಅವರು ನೀವು ನಮ್ಮ ಮೇಲೆ ಹಲ್ಲೆ ನಡೆಸಬಹುದು, ಕೈ ಕಾಲು ಮುರಿಯಬಹುದು, ಜೈಲಿಗೆ ಹಾಕಬಹುದು, ಕೊಲೆ ಮಾಡಬಹುದು ಅದಕ್ಕಿಂತ ಹೆಚ್ಚು ನಿಮಗೇನುಮಾಡಲು ಸಾದ್ಯವಿಲ್ಲ ಎಂದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದ ಸಿಪಿಐಎಂ ದ.ಕ.ಜಿಲ್ಲಾ ಸಮಿತಿ ಸದಸ್ಯರಾದ ಈಶ್ವರಿಪದ್ಮುಂಜ ಅವರು ಮಕ್ಕಳ ಮೇಲೆ ಹಲ್ಲೆ ನಡೆಸಲು ಪೋಲೀಸರ ಹೆಸರಲ್ಲಿ ಬಿಜೆಪಿಯ ಗೂಂಡಾಗಳನ್ನು ಕಳುಹಿಸಿದ ಸರಕಾರದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದರು. ಹಿರಿಯ ರೈತ ಮುಖಂಡರಾದ ಲಕ್ಷ್ಮಣ ಗೌಡ ಅವರು ಮಾತಾಡಿದರು. ತರುವಾಯ ಕೇಂದ್ರ ಸರಕಾರವನ್ನು ವಜಾಗೋಳಿಸಲು ಆಗ್ರಹಿಸಿ ರಾಷ್ಟ್ರ ಪತಿಗಳಿಗೆ ತಾಲೂಕು ತಹಸೀಲ್ದಾರ್ ಮೂಲಕ ನೀಡಿದ ಮನವಿಯನ್ನು ಪಕ್ಷದ ತಾಲೂಕು ಸಮಿತಿ ಸದಸ್ಯೆ ಜಯಶ್ರೀ ಓದಿದರು. ಡಿ.ವೈ.ಎಫ್.ಐ. ತಾಲೂಕು ಕಾರ್ಯದರ್ಶಿ ಅಭಿಷೇಕ್ ವಂದಿಸಿದರು. ಹೋರಾಟದ ನಾಯತ್ವದಲ್ಲಿ ಧನಂಜಯ, ಜಯರಾಮ ಮಯ್ಯ, ಸುಕುಮಾರ್, ಜನವಾದಿ ಮಹಿಳಾಸಂಘಟನೆಯ ಜಿಲ್ಲಾಧ್ಯಕ್ಷರಾದ ಕಿರಣಪ್ರಭ, ಕುಮಾರಿ, ಅಪ್ಪಿ ಕೊಯ್ಯೂರು, ಪಕ್ಷದ ನಾಯಕರುಗಳಾದ ಪುಷ್ಪ, ಅಶ್ವಿತ, ಅಪ್ಸರಾಲಿಯ, ಜಯಂತ ಪಾದೆಜಾಲು, ವಸಂತ ಟೈಲರ್, ಶಾಜಿ ನೆರಿಯ, ಪುಟ್ಟಣ್ಣ ಪಟ್ರಮೆ, ದೊಲ್ಲ ಗೌಡ, ಅಣ್ಣು, ರಾಮಚಂದ್ರ, ಗಣೇಶ ಪ್ರಸಾದ್, ಇಂತಿಯಾಸ್ ಕಲ್ಲೇರಿ, ಪ್ರವೀಣ, ಸದಾಶಿವ ಶೆಟ್ಟಿ ಸಿದ್ದಿಕ್ ಪಟ್ರಮೆ, ಸೋಮಶೇಖರ, ದಾಮೋದರ ಮೊದಲಾದವರು ಇದ್ದರು.