
ಮಂಗಳೂರು ಡಿ.ಎಸ್.ಎಸ್. ಸಂಸ್ಥಾಪಕರಲ್ಲಿ ಪ್ರಮುಖರು, ರಾಜ್ಯ ಸಂಘಟನಾ ಸಂಚಾಲಕರು, ಹಿರಿಯ ದಲಿತ ಮುಖಂಡರು ಆದ ಎಂ.ದೇವದಾಸ್ ನಿಧನರಾಗಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆಯಲ್ಲಿದ್ದ ಅವರು 12-07-2026ರಂದು ಮುಂಜಾನೆ ಕಾಣಿಸಿಕೊಂಡ ಉಸಿರಾಟ ತೊಂದರೆಗೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಎಂ.ದೇವದಾಸ್ ಸೋಮವಾರ ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು ನಂತರ ಇಂದು ಮುಂಜಾನೆ 3.30ಕ್ಕೆ ರಕ್ತದೊತ್ತಡದ ಏರಿಳಿತದಿಂದ ನಿಧನರಾದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯನ್ನು ಮಂಗಳೂರಲ್ಲಿ ಪ್ರಾರಂಭಿಸಲು ಸಕಲೇಶ್ ಪುರದ ಹಾಡ್ಯದ ಜಿ.ಸೋಮಶೇಖರ್ ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮಂಗಳೂರಲ್ಲಿ ಡಿ.ಎಸ್.ಎಸ್. ಪ್ರಾರಂಭಿಸಲು ದೇವದಾಸ್ ರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿ ಡಿ.ಎಸ್.ಎಸ್. ಕಟ್ಟಿ ಬೆಳೆಸಲು ಕಾರಣರಾದರು. ಮುಂದೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಯಲ್ಲಿ ದ.ಸಂ.ಸ. ಪಸರಿಸಲು ಟೊಂಕ ಕಟ್ಟಿ ನಿಂತ ದೇವದಾಸ್, ದಲಿತ ಚಳವಳಿಯ ಸಾಕ್ಷಿ ಪ್ರಜ್ಞೆಯಾಗಿದ್ದರು. ದೇವದಾಸ್ ರವರು ಪತ್ನಿ, ಇಬ್ಬರು ಹೆಣ್ಣುಮಕ್ಕಳನ್ನು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ದೇವದಾಸ್ ರವರ ಬಜಪೆ ಸಿದ್ದಾರ್ಥ ನಗರದ ನಿವಾಸದಲ್ಲಿ ಮಧ್ಯಾಹ್ನ 2.00 ಗಂಟೆಯಿಂದ ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು ಸಂಜೆ 4.00 ಗಂಟೆಗೆ ಸಿದ್ದಾರ್ಥ ನಗರದಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನ ನಡೆಯಲಿದೆ.