
ಬೆಳ್ತಂಗಡಿ : ಹೆಬ್ರಿಯಿಂದ ನಾರಾವಿಯ ಮನೆಯೊಂದಕ್ಕೆ ಕೆಲಸಕ್ಕೆಂದು ಬಂದು ನಾಪತ್ತೆಯಾಗಿದ್ದ ವ್ಯಕ್ತಿಯೃತದೇಹ ಈದು ಗ್ರಾಮದ ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತ ವ್ಯಕ್ತಿ ಹೆಬ್ರಿ ಮಿಯಾರು ನಾಲ್ಕೂರು ನಿವಾಸಿ ಪ್ರಭಾಕರ ಶೆಟ್ಟಿ (45) ಎಂಬವರಾಗಿದ್ದಾರೆ.
ಇವರು ಜು 7ರಂದು ಬೆಳ್ತಂಗಡಿ ತಾಲೂಕಿನ ನಾರಾವಿ ಅರಸಿಕಟ್ಟೆ ನಿವಾಸಿ ರವಿರಾಜ್ ಜೈನ್ ಎಂಬವರ ಮನೆಗೆ ರೊಟ್ಟಿ ಮಾಡಲು ಬಂದಿದ್ದರು. ಮದ್ಯಾಹ್ನದ ವರೆಗೆ ಕೆಲಸ ಮಾಡಿ ಬಳಿಕ ಅವರು ಅಲ್ಲಿಂದ ಹಿಂತಿರುಗಿದ್ದರು ಆದರೆ ಅಂದು ಪ್ರಭಾಕರ ಶೆಟ್ಟಿ ಮರಳಿ ಮನೆ ಸೇರಿರಲಿಲ್ಲ. ಆತನಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿಗಳು ಸಿಗದ ಹಿನ್ನಲೆಯಲ್ಲಿ ಈ ಬಗ್ಗೆ ಹೆಬ್ರಿ ಪೊಲೀಸರಿಗೆ ದೂರು ನೀಡಲಾಗಿತ್ತು.ಉಮೇಶ್ ಎಂಬವರು ನೀಡಿದ ದೂರಿನಂತೆ ಪ್ರಕರಣದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಬೆಳ್ತಂಗಡಿಯ ವೇಣೂರು ಠಾಣೆಗೆ ವರ್ಗಾಯಿಸಿದ್ದರು.
ಇದೀಗ ಜು.12 ರಂದು ಭಾನುವಾರ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಈದುವಿನ ನಿವಾಸಿ ವಿಘ್ನೇಶ್ ಭಟ್ ಎಂಬವರ ತೋಟದಲ್ಲಿ ಕೊಳೆತ ಸ್ಥಿತಿಯಲ್ಲಿ ಪ್ರಭಾಕರ ಶೆಟ್ಟಿಯ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಈತ ಯಾವ ರೀತಿ ಮೃತಪಟ್ಟಿರಬಹುದು ಎಂಬ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ಪ್ರಭಾಕರ ಒಂದಿಷ್ಟು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಎನ್ನಲಾಗಿದ್ದು ಪೊಲೀಸರ ತನಿಖೆಯಿಂದಷ್ಟೆ ಹೆಚ್ಚಿನ ಮಾಹಿತಿಗಳು ತಿಳಿದು ಬರಬೇಕಾಗಿದೆ