
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು ವಾಹನಗಳ ಹಾಗೂ ಜನರ ಸಂಚಾರ ಅಸಾಧ್ಯವಾಗಿದೆ. ರಸ್ತೆಯಲ್ಲಿ ದೊಡ್ಡ ಹೊಂಡಗಳೇ ಬಿದ್ದಿದ್ದು ಕನಿಷ್ಟ ದುರಸ್ತಿಗೂ ಮುಂದಾಗದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ರಿಕ್ಷಾ ಚಾಲಕರು ಒಟ್ಟಾಗಿ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ಆರಂಭಿಸಿದ್ದಾರೆ.
ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿ ಮಾರ್ಗವಾಗಿ ದಿಡುಪೆ- ಪೈಚಾರು ರಾಜ್ಯಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ
ಕಳೆದ 5 ವರ್ಷಗಳಿಂದ ಸಂಪೂರ್ಣ ಹದಗೆಟ್ಟ ರೀತಿಯಲ್ಲಿದ್ದು ವರ್ಷದ ಹಿಂದೆಯೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳೀಯ ಜನಪ್ರತಿನಿಧಿಗಳು ದುರಸ್ತಿ ಮಾಡುವ ಭರವಸೆ ನೀಡಿದ್ದರೂ ಯಾವುದೂ ಈಡೇರಿಲ್ಲ. ಪ್ರತಿನಿತ್ಯ ನೂರಾರು ಮಂದಿ ವಿದ್ಯಾರ್ಥಿಗಳು ಸಾರ್ವಜನಿಕರು ನಡೆದುಕೊಂಡು, ವಾಹನಗಳು ಓಡಾಟ ನಡೆಸುವ ರಸ್ತೆ ಇದಾಗಿದೆ. ನಡೆದುಕೊಂಡು ಹೋಗುವವರು ರಸ್ತೆಯಲ್ಲಿ ಸೃಷ್ಟಿಯಾಗಿರುವ ಹೊಂಡಗಳಿಂದಾಗಿ ಓಡಾಡಲು ಅಸಾದ್ಯವಾಗಿದೆ. ಇಲ್ಲಿ ರಸ್ತೆಯ ಹೊಂಡಗಳಿಗೆ ಬಿದ್ದು ವಾಹನ ಅಪಘಾತಗಳೂ ಸಂಭವಿಸುತ್ತಿದೆ ಎಂದು ಹೋರಾಟಗಾರರು ಆರೋಪಿಸುತ್ತಿದ್ದಾರೆ.
ಕಳೆದ ಒಂದು ಗಂಟೆಯಿಂದ. ಅಜಿಕುರಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾ ಕಾರರು ಜನಪ್ರತಿನಿಧಿಗಳು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಭರವಸೆ ನೀಡುವ ವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.