
ಸುಳ್ಯ: ದೇಶಾದ್ಯಂತ ತೂಗು ಸೇತುವೆಗಳ ಸರದಾರ’ ಹಾಗೂ ‘ಭಾರತದ ಸೇತುವೆ ಮನುಷ್ಯ’ (Bridge Man of India) ಎಂದೇ ಪ್ರಖ್ಯಾತರಾಗಿದ್ದ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ವಿಧಿವಶರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉತ್ತರಾಖಂಡದ ಪವಿತ್ರ ದೇಗುಲಗಳ ಪ್ರವಾಸ ಕೈಗೊಂಡಿದ್ದ ಅವರು, ತೀವ್ರ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮೂವರು ಮಕ್ಕಳನ್ನು ಅಗಲಿದ್ದಾರೆ.
ಗಿರೀಶ್ ಭಾರದ್ವಾಜ್ ಅವರು ದೇಶದ ವಿವಿಧೆಡೆ, ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ನೂರಾರು ತೂಗು ಸೇತುವೆಗಳನ್ನು ನಿರ್ಮಿಸುವ ಮೂಲಕ ಸಂಪರ್ಕ ಕ್ರಾಂತಿ ಉಂಟುಮಾಡಿದ್ದರು. ನದಿ, ತೊರೆಗಳಿಂದಾಗಿ ಮುಖ್ಯವಾಹಿನಿಯಿಂದ ದೂರವುಳಿದಿದ್ದ ಹತ್ತಾರು ಹಳ್ಳಿಗಳಿಗೆ ಇವರು ನಿರ್ಮಿಸಿದ ತೂಗು ಸೇತುವೆಗಳು ಆಸರೆಯಾಗಿದ್ದವು. ಇವರ ಅಪಾರ ಜನಸೇವೆ ಹಾಗೂ ತಾಂತ್ರಿಕ ಕೊಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ ಇವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ‘ಪದ್ಮಶ್ರೀ’ ಪುರಸ್ಕಾರ ನೀಡಿ ಗೌರವಿಸಿತ್ತು.