
ನ್ಯೂಜೆರ್ಸಿ: 2026ರ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟ‌್ರಫೈನಲ್
ಪಂದ್ಯದಲ್ಲಿ ನಾರ್ವೆ ವಿರುದ್ಧ ಬ್ರೆಜಿಲ್ ತಂಡ ಆಘಾತಕಾರಿ ಸೋಲು ಅನುಭವಿಸಿದೆ. ಈ ಬೆನ್ನಲ್ಲೇ ಬ್ರೆಜಿಲ್‌ನ ಸ್ಟಾರ್ ಆಟಗಾರ ನೇಮಾರ್ ಜೂನಿಯರ್ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಮೆಟ್‌ಲೈಫ್ ಸ್ಟೇಡಿಯಂನಲ್ಲಿ ನಡೆದ ರೋಚಕ ಪಂದ್ಯದಲ್ಲಿ ನಾರ್ವೆ ತಂಡ 2-1 ಗೋಲುಗಳ ಅಂತರದಿಂದ ಬ್ರೆಜಿಲ್‌ಗೆ ಮಣ್ಣು ಮುಕ್ಕಿಸಿತು. ಪಂದ್ಯದ ಕೊನೆಯ ಕ್ಷಣದಲ್ಲಿ ಬ್ರೆಜಿಲ್ ಪರ ನೇಮಾರ್ ಪೆನಾಲ್ಟಿ ಮೂಲಕ ಏಕೈಕ ಗೋಲು ಗಳಿಸಿದರಾದರೂ ತಂಡವನ್ನು ಸೋಲಿನಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ನಾರ್ವೆಯ ಯುವ ಆಟಗಾರ ಹಾಲೆಂಡ್ ಅವರ ಅವಳಿ ಗೋಲುಗಳು ಬ್ರೆಜಿಲ್ ನ ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿತ್ತು.
ಇಂದು ಬೆಳಗ್ಗೆ ನಡೆದ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಮೆಕ್ಸಿಕೋವನ್ನು 3- 2 ಅಂತರದಲ್ಲಿ ಸೋಲಿಸಿ ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ
ಗಾಯದ ಸಮಸ್ಯೆಯಿಂದ ವಿಶ್ವಕಪ್ ಆರಂಭದ ಕೆಲವು ಪಂದ್ಯಗಳನ್ನು ತಪ್ಪಿಸಿದ್ದ ನೇಮರ್, ಬಳಿಕ ಸಂಪೂರ್ಣ ಫಿಟ್ ಆಗಿ ತಂಡಕ್ಕೆ ಮರಳಿದರೂ, ಮುಖ್ಯವಾಗಿ ಬದಲಿ ಆಟಗಾರನಾಗಿ ಅವಕಾಶ ಪಡೆದಿದ್ದರು.
ಪಂದ್ಯದ ಮುಕ್ತಾಯದ ನಂತರ ಕಣ್ಣೀರು ಹಾಕುತ್ತಾ ಮಾತನಾಡಿದ ನೇಮಾರ್, “ನಾನು ಸಾಕಷ್ಟು ಪ್ರಯತ್ನಿಸಿದೆ, ಆದರೆ ನನ್ನ ಪಯಣ ಇಲ್ಲಿಗೆ ಮುಗಿದಿದೆ. ನಾನು ಎಲ್ಲಿಂದ ವೃತ್ತಿಜೀವನ ಆರಂಭಿಸಿದ್ದನೋ ಅಲ್ಲೇ ಅದನ್ನು ಕೊನೆಗೊಳಿಸುತ್ತಿದ್ದೇನೆ” ಎಂದು ಭಾವುಕರಾಗಿ ನುಡಿದರು.
2010ರಲ್ಲಿ ಬ್ರೆಜಿಲ್ ಸೀನಿಯರ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ನೇಮಾರ್, ಒಟ್ಟು 129 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದಾಖಲೆಯ 80 ಗೋಲುಗಳನ್ನು ಗಳಿಸುವ ಮೂಲಕ ಬ್ರೆಜಿಲ್ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಬಾರಿಸಿದ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಾಲ್ಕು ವಿಶ್ವಕಪ್‌ಗಳಲ್ಲಿ ಬ್ರೆಜಿಲ್ ತಂಡವನ್ನು ಮುನ್ನಡೆಸಿದ್ದ ನೇಮಾರ್ ಅವರಿಗೆ ವಿಶ್ವಕಪ್ ಟ್ರೋಫಿ ಒಲಿಯದಿದ್ದರೂ, 2013ರ ಕಾನ್ನೆಡರೇಷನ್ ಕಪ್ ಹಾಗೂ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬ್ರೆಜಿಲ್‌ಗೆ ಚಾರಿತ್ರಿಕ ಚಿನ್ನದ ಪದಕ ತಂದುಕೊಟ್ಟ ಹಿರಿಮೆ ಅವರಿಗಿದೆ. ಗಾಯದ ಸಮಸ್ಯೆಗಳು ಮತ್ತು ಅಪಾರ ನಿರೀಕ್ಷೆಗಳ ಒತ್ತಡದ ನಡುವೆಯೂ ನೇಮಾರ್ ಬ್ರೆಜಿಲ್ ಫುಟ್‌ಬಾಲ್‌ನ ದಶಕದ ಸುಲ್ತಾನನಾಗಿ ಮಿನುಗಿದ್ದರು. ನೇಮಾರ್ ಅವರ ನಿವೃತ್ತಿ ಜಾಗತಿಕ ಫುಟ್‌ಬಾಲ್‌ನ ಒಂದು ಸುವರ್ಣ ಯುಗದ ಅಂತ್ಯವನ್ನು ಸೂಚಿಸಿದೆ