Home ಅಪರಾಧ ಲೋಕ ಮಂಗಳೂರು ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಮಂಗಳೂರು ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣ: ಮೂವರು ಆರೋಪಿಗಳ ಬಂಧನ

0

ಮಂಗಳೂರು:
ರಾಷ್ಟ್ರೀಯ ಹೆದ್ದಾರಿ-66ರ ಬೈಕಂಪಾಡಿ ಸಮೀಪ ಇತ್ತೀಚೆಗೆ ನಸುಕಿನ ಜಾವ ಕಾರೊಂದನ್ನು ಅಡ್ಡಗಟ್ಟಿ, ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಹಾಗೂ ಅಪಹರಣ ನಡೆಸಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೋಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ಕೇರಳದ ಕಣ್ಣೂರು ನಿವಾಸಿ ನಿಮಿಲ್ ಆರ್.ಕೆ (37), ಕೊಡಗು ಜಿಲ್ಲೆಯ ಮಡಿಕೇರಿ ನಿವಾಸಿಗಳಾದ ಇರ್ಷಾದ್ (40) ಮತ್ತು ಮುಸ್ತಾಫ (49) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಈ ದರೋಡೆ ಜಾಲದಲ್ಲಿ ಒಟ್ಟು 16 ಆರೋಪಿಗಳು ಭಾಗಿಯಾಗಿದ್ದು, ಸದ್ಯ ಬಂಧಿತರಾಗಿರುವ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ಪೋಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಚಿನ್ನಾಭರಣ, ಕಾರು ಸೇರಿ ₹23.10 ಲಕ್ಷ ದರೋಡೆ:
ಮಹಾರಾಷ್ಟ್ರದಿಂದ ಕೇರಳದ ಪಯ್ಯನ್ನೂರಿಗೆ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ತೆರಳುತ್ತಿದ್ದ ವಿಕಾಸ್ ಸುಬ್ಬರಾವ್ ಧನವಡೆ ಎಂಬುವವರನ್ನು ಜೂನ್ 29ರ ನಸುಕಿನ ಜಾವ 2:45ರ ಸುಮಾರಿಗೆ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ 6-7 ಮುಸುಕುಧಾರಿಗಳು ಅಡ್ಡಗಟ್ಟಿದ್ದರು. ತಲವಾರು ತೋರಿಸಿ ಬೆದರಿಸಿ, ವಿಕಾಸ್ ಅವರ ಮೇಲೆ ಹಲ್ಲೆ ನಡೆಸಿದ್ದ ದರೋಡೆಕೋರರು, ಅವರ ಪತ್ನಿ ಹಾಗೂ ಮಗನನ್ನು ಬಲವಂತವಾಗಿ ಅಪಹರಿಸಿ ಕೆಲವು ಕಿಲೋಮೀಟರ್ ದೂರದಲ್ಲಿ ಬಿಟ್ಟಿದ್ದರು. ಬಳಿಕ ಕಾರಿನಲ್ಲಿದ್ದ ₹20 ಲಕ್ಷ ಮೌಲ್ಯದ 180 ಗ್ರಾಂ ಚಿನ್ನಾಭರಣ, ಎರಡು ಮೊಬೈಲ್ ಹಾಗೂ ₹3 ಲಕ್ಷ ಮೌಲ್ಯದ ಕಾರು ಸೇರಿದಂತೆ ಒಟ್ಟು ₹23,10,000 ಮೌಲ್ಯದ ಸೊತ್ತನ್ನು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ಪೋಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾರು ಪತ್ತೆ, ಕೇರಳ-ಕೊಡಗಿನಲ್ಲಿ ಆರೋಪಿಗಳ ಬೇಟೆ:
ಕಾರ್ಯಾಚರಣೆಗಿಳಿದ ಪೋಲೀಸರು ಜೂನ್ 30ರಂದು ಬಂಟ್ವಾಳ ತಾಲೂಕಿನ ಪಚ್ಚಿನಡ್ಕ ಎಂಬಲ್ಲಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿದ್ದ ದೂರುದಾರರ ಕಾರನ್ನು ಪತ್ತೆ ಹಚ್ಚಿ ಸ್ವಾಧೀನಪಡಿಸಿಕೊಂಡಿದ್ದರು. ತನಿಖೆ ಮುಂದುವರಿಸಿ ಜುಲೈ 2ರಂದು ಕೇರಳದ ಕಣ್ಣೂರಿನ ಆಸ್ಪತ್ರೆಯೊಂದರ ಬಳಿ ಪ್ರಮುಖ ಆರೋಪಿ ನಿಮಿಲ್‌ನನ್ನು ಬಂಧಿಸಲಾಯಿತು. ಇದೇ ವೇಳೆ ಕೃತ್ಯಕ್ಕೆ ಆಶ್ರಯ ಹಾಗೂ ಕಾರು ಒದಗಿಸಿ ಸಹಕರಿಸಿದ್ದ ಇರ್ಷಾದ್ ಮತ್ತು ಮುಸ್ತಾಫನನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆ ಹಾಗೂ ಮೂರ್ನಾಡು ಜಂಕ್ಷನ್‌ನಲ್ಲಿ ಬಂಧಿಸಲಾಗಿದೆ.

ಉಳಿದ 13 ಆರೋಪಿಗಳಿಗಾಗಿ ಜಾಲ:
ಪ್ರಾಥಮಿಕ ತನಿಖೆಯಲ್ಲಿ ದರೋಡೆಯಲ್ಲಿ ಒಟ್ಟು 14 ಆರೋಪಿಗಳು ನೇರವಾಗಿ ಭಾಗಿಯಾಗಿದ್ದು, ಇಬ್ಬರು ಆಶ್ರಯ ನೀಡಿದ್ದರು ಎಂಬುದು ತಿಳಿದುಬಂದಿದೆ. ಆರೋಪಿಗಳೆಲ್ಲರೂ ಮಡಿಕೇರಿ ಮತ್ತು ಕೇರಳ ಮೂಲದವರಾಗಿದ್ದಾರೆ. ಸದ್ಯ ಕೃತ್ಯಕ್ಕೆ ಬಳಸಿದ್ದ 1 ಇನ್ನೋವಾ ಕ್ರಿಸ್ಟಾ ಕಾರನ್ನು ವಶಪಡಿಸಿಕೊಳ್ಳಲಾಗಿದ್ದು, ಉಳಿದ 3 ಕಾರುಗಳು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್‌ಗಳ ಪತ್ತೆ ಕಾರ್ಯ ಬಾಕಿ ಇದೆ. ತಲೆಮರೆಸಿಕೊಂಡಿರುವ ಇನ್ನುಳಿದ 13 ಆರೋಪಿಗಳ ಪತ್ತೆಗಾಗಿ ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ಕೆ. ಹಾಗೂ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯ್ಕ್ ನೇತೃತ್ವದಲ್ಲಿ ವಿಶೇಷ ಪೋಲೀಸ್ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version