ಬೆಳ್ತಂಗಡಿ : ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮರವನ್ನು ಕಡಿಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆರಿಯಕಾಡು ಎಂಬಲ್ಲಿ ಸರಕಾರಿ ಜಾಗದಲ್ಲಿ ನೆರಿಯ ಗ್ರಾಮದ ಅಂಬ್ಲೆ ನಿವಾಸಿ ರಾಜಪ್ಪ ಗೌಡ(57) ಎಂಬವರು ಅಕ್ರಮವಾಗಿ ಯಾವುದೇ ಅನುಮತಿ ಇಲ್ಲದೆ ಹೆಬ್ಬಲಸು ಮರವನ್ನು ಕಡಿಯುತ್ತಿರುವ ಬಗ್ಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಆರ್.ಎಫ್.ಒ ತ್ಯಾಗರಾಜ್ ಗೆ ಬಂದ ಖಚಿತ ಮಾಹಿತಿ ಮೇರೆಗೆ ಜೂ.29 ರಂದು ದಾಳಿ ಮಾಡಿದ್ದಾರೆ.
ಸರಕಾರಿ ಜಾಗಕ್ಕೆ ದಾಳಿ ಮಾಡಿದ ವೇಳೆ ಒಂದು ಹೆಬ್ಬಲಸು ಮರವನ್ನು ಕಡಿದು ತುಂಡರಿಸಿರುವುದು ಪತ್ತೆಯಾಗಿದೆ. ಕಡಿದಿರುವ ಮರಗಳನ್ನು ಮಹಜರು ನಡೆಸಿ ವಶಪಡಿಸಿಕೊಂಡು ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಜೂ.30 ರಂದು ವರದಿ ಮಾಡಿಕೊಂಡು ಬೆಳ್ತಂಗಡಿ ನ್ಯಾಯಾಲಯಕ್ಕೆ ಜು.1 ರಂದು ಪ್ರಕರಣ ದಾಖಲಿಸಲು ವರದಿಯನ್ನು ಸಲ್ಲಿಸಿ ಜು.2 ರಂದು ಅನುಮತಿ ಸಿಕ್ಕಿದ ಬಳಿಕ ಸಂಜೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ನೆರಿಯ ಗ್ರಾಮದ ಅಂಬ್ಲೆ ನಿವಾಸಿ ಆರೋಪಿ ರಾಜಪ್ಪ ಗೌಡ(57) ವಿರುದ್ಧ THE KARNATAKA FOREST ACT, 1963 8 Sections 33(2) of the THE KARNATAKA FOREST ACT, 1963 THE KARNATAKA FOREST RULES, 1969, 25(3)d ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದಲ್ಲಿ ನೆರಿಯ ಡಿ.ಆರ್.ಎಫ್.ಒ ರವಿಚಂದ್ರ, ಗಸ್ತು ವನಪಾಲಕ ರವಿ ಜಟ್ಟಿ ಮುಕ್ರಿ , ಚಿಬಿದ್ರೆ ಡಿ.ಆರ್.ಎಫ್.ಒ ದೀಪಾ ಗಡಿಗ, ಚಾಲಕ ಕುಶಾಲಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.










