ಬೆಳ್ತಂಗಡಿ; ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಜೀವ ಬೆದರಿಕೆ ಪ್ರಕರಣದ ತನಿಖೆ ಮುಂದುವರಿಕೆಗೆ ಮಂಗಳವಾರ ಅನುಮತಿಸಿರುವ ಕರ್ನಾಟಕ ಹೈಕೋರ್ಟ್, ಇದೇ ಪ್ರಕರಣದಲ್ಲಿ ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯಿಸಿದ ಆರೋಪದ ತನಿಖೆಗೆ ತಡೆ ನೀಡಿ ಆದೇಶ ಹೊರಡಿಸಿದೆ.
ಜೀವ ಬೆದರಿಕೆ ಹಾಕಿದ ಮತ್ತು ಸುಳ್ಳು ಸಾಕ್ಷ್ಯ ಹೇಳಲು ಬಲವಂತಪಡಿಸಿದ ಆರೋಪದ ಮೇಲೆ ಪುತ್ತೂರು ಗ್ರಾಮೀಣ ಠಾಣಾ ಪೊಲೀಸರು ದಾಖಲಿಸಿರುವ ಎಫ್ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು. ತನಿಖೆಗೆ ತಿಮರೋಡಿ ಪೊಲೀಸರಿಗೆ ಸಹಕರಿಸಬೇಕು ಎಂದು ನಿರ್ದೇಶಿಸಿತು.
ತಿಮರೋಡಿ ಪರ ವಕೀಲ ಎಂ ಆರ್ ಬಾಲಕೃಷ್ಣ ಅವರು, ಅರ್ಜಿದಾರರು ಪ್ರಕರಣದಲ್ಲಿ ಮೊದಲನೆ ಆರೋಪಿಯಾಗಿದ್ದಾರೆ. ಪ್ರಕರಣದ ದೂರುದಾರರಿಗೆ, ಎರಡನೇ ಆರೋಪಿಯು ಫೋನ್ ಮಾಡಿ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವಿದೆ. ಅರ್ಜಿದಾರರನ್ನು ಅಪರಾಧಿಯನ್ನಾಗಿಸಲು ಅಗತ್ಯವಾದ ಅಂಶಗಳು ದೂರಿನಲ್ಲಿ ಇಲ್ಲ. ಈ ಆರೋಪಗಳು ಅರ್ಜಿದಾರಿಗೆ ಅನ್ವಯವಾಗದು. ಘಟನೆ ನಡೆದ 16 ದಿನಗಳ ನಂತರ ದೂರು ದಾಖಲಿಸಲಾಗಿದೆ. ದುರುದ್ದೇಶದಿಂದ ತಿಮರೋಡಿ ಮೇಲೆ ದೂರು ದಾಖಲಿಸಲಾಗಿದೆ” ಎಂದರು.
ದೂರುದಾರರಾದ ಸತೀಶ್ ಕುಮಾರ್ ರೈ ಅವರ ಪರ ವಕೀಲರು ಎಸ್ ರಾಜಶೇಖರ್ ಅವರು “ಫೋನ್ ಸಂಭಾಷಣೆಯ ವಿವರ ಒಳಗೊಂಡ ಪೆನ್ ಡ್ರೈವ್ ಹಾಗೂ ಸಂಭಾಷಣೆಯ ವಿವರ ಸಲ್ಲಿಸಲಾಗಿದೆ. ಅರ್ಜಿದಾರರ ವಿರುದ್ಧ ಹಿಂದೆ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ದೂರುದಾರನ್ನು ಬೆದರಿಸಲಾಗಿದೆ” ಎಂದು ತಿಳಿಸಿರು.
ವಾದ- ಪ್ರತಿವಾದ ಆಲಿಸಿದ ಪೀಠವು ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಆರೋಪಿಸಲಾಗಿರುವ ಸುಳ್ಳು ಸಾಕ್ಷ್ಯ ನೀಡುವಂತೆ ಬಲವಂತಪಡಿಸಿದ (ಬಿಎನ್ ಎಸ್ ಸೆಕ್ಷನ್ 232) ಅಪರಾಧ ಸಂಬಂಧ ತನಿಖೆ ನಡೆಸುವುದಕ್ಕೆ ತಡೆ ನೀಡಿತು. ಆದರೆ, ಜೀವ ಬೆದರಿಕೆ ಹಾಕಿದ (ಬಿಎನ್ ಎಸ್ ಸೆಕ್ಷಮ್ 351(2) ಅಪರಾಧ ಸಂಬಂಧ ಪೊಲೀಸರು ತನಿಖೆ ಮುಂದುವರಿಸಬಹುದು. ಅರ್ಜಿದಾರರು ತನಿಖೆಗೆ ಸಹಕರಿಸಬೇಕು ಎಂದು ಆದೇಶ ಮಾಡಿ ಅರ್ಜಿ ವಿಚಾರಣೆ ಮುಂದೂಡಿತು.









