ಕೊಕ್ಕಡ, ಜೂ. 16 : ಬೆಳ್ತಂಗಡಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಕೊಕ್ಕಡ ಗ್ರಾಮದ ಹಳ್ಳಿಂಗೇರಿಯಲ್ಲಿ ಮನೆಯ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಪ್ರಸ್ತುತ ಕೊಕ್ಕಡ ಹಳ್ಳಿಂಗೇರಿಯ ನಿವಾಸಿಯಾಗಿರುವ ಮೂಲತಹ ಧಾರವಾಡ ಜಿಲ್ಲೆಯ ಹಿರೇಗುಂಜಲ್-ಚಿಕ್ಕಗುಂಜಲ್ ಮೂಲದ ರಮೇಶ್ ಅವರ ಪುತ್ರಿ ಶ್ವೇತಾ(18) ಎಂದು ಗುರುತಿಸಲಾಗಿದೆ. ಕಳೆದ ಸುಮಾರು ಐದು ವರ್ಷಗಳಿಂದ ಶ್ವೇತಾ ಅವರ ತಂದೆ-ತಾಯಿ ಕೊಕ್ಕಡ ಸಮೀಪದ ಹಳ್ಳಿಂಗೇರಿಯಲ್ಲಿ ನೆಲೆಸಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಮಾಹಿತಿಯ ಪ್ರಕಾರ, ಶ್ವೇತಾ ಎಂದಿನಂತೆ ಬೆಳಗ್ಗೆ ಎದ್ದು ಕಾಲೇಜಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಘಟನೆ ನಡೆದ ವೇಳೆ ತಂದೆ ಕೆಲಸದ ನಿಮಿತ್ತ ಹೊರಗೆ ತೆರಳಿದ್ದು, ತಾಯಿ ಮಾತ್ರ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಈ ಮಧ್ಯೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶ್ವೇತಾ ಪತ್ತೆಯಾಗಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ತೆರಳಿದ್ದು ಪರಿಶೀಲನೆ ನಡೆಸಿದ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.










