ಬೆಳ್ತಂಗಡಿ; ದೇಶದ ದುಡಿಯುವ ಜನರ ಏಳಿಗೆಗಾಗಿ, ದೇಶದ ಅಭಿವೃದ್ದಿಗಾಗಿ ಶೋಷಣಾ ಮುಕ್ತ ಸಮಾಜದ ನಿರ್ಮಾಣದ ಗುರಿ ಹೊತ್ತು ದುಡಿಯುತ್ತಿರುವ ಸಿಪಿಐಎಂ ಪಕ್ಷದ ಸದಸ್ಯರಿಗೆ ಸೈದ್ದಾಂತಿಕ ತರಬೇತಿ ನೀಡಿದ ಶಿಬಿರವು ತಾಲೂಕಿನ ದುಡಿಯುವ ಜನರಿಗೆ ನ್ಯಾಯ ಒದಗಿಸಲು ಸಹಕಾರಿಯಾಗಲಿ ಎಂದು ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಪಾಂಗಳ ಲಕ್ಷ್ಮಣ ಗೌಡ ಅವರ ಮನೆಯಲ್ಲಿ ನಡೆದ ಪಕ್ಷದ 3 ದಿನದ ಸೈದ್ದಾಂತಿಕ ಶಿಬಿರದ ಸಮಾರೋಪ ಸಭೆಯನ್ನುದ್ದೇಶಿಸಿ ಮಾತಾಡಿದರು. ಅರಣ್ಯವಾಸಿಗಳ ಭೂಮಿಯ ಪ್ರಶ್ನೆ, ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಗಾಗಿ, ಅಕ್ರಮಸಕ್ರಮ ಹಕ್ಕುಪತ್ರಕ್ಕಾಗಿ, 94 ಸಿ ಹಕ್ಕುಪತ್ರ, 9 & 11 ಸಮಸ್ಯೆ, ಬೀಡಿ ಕಾರ್ಮಿಕರ ಸಮಸ್ಯೆ, ಸರಕಾರಿ ಆಸ್ಪತ್ರೆಯ ಖಾಸಗೀಕರಣ ಪ್ರಶ್ನೆ, ವಿಧವಾ ವೇತನ, ವೃದ್ದಾಪ್ಯ ವೇತನ ಸಿಗದಿರುವ ಬಗ್ಗೆ ಇತ್ಯಾದಿ ಸ್ಥಳೀಯ ಸಮಸ್ಯೆಗಳ ವಿರುದ್ದ ನಿರ್ಣಾಯಕ ಹೋರಾಟ ನಡೆಸಲು ಹಾಗೂ ನ್ಯಾಯ ಪಡೆಯಲು ಈ ಶಿಬಿರ ಸಹಕಾರಿಯಾಗಲಿ ಎಂದವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಸಿಪಿಐಎಂ ತಾಲೂಕು ಸಮಿತಿ ಸದಸ್ಯರಾದ ಪಾಂಗಳ ಲಕ್ಷ್ಮಣ ಗೌಡ ಅವರು ವಹಿಸಿದ್ದರು. ಪಕ್ಷದ ತಾಲೂಕು ಕಾರ್ಯದರ್ಶಿ ಬಿ.ಎಂ.ಭಟ್ ಸ್ವಾಗತಿಸಿದರು. ಪಕ್ಷದ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿಶಂಕರ್ ಪದ್ಮುಂಜ ವಂದಿಸಿದರು. ಶಿಬಿರದಲ್ಲಿ ಶಿಕ್ಷಕರಾಗಿ ರೈತ ಮುಖಂಡರಾದ ನವೀನ್ ಕುಮಾರ್ ಹಾಸನ, ಮುನೀರ್ ಕಾಟಿಪಳ್ಳ, ಬಿ.ಎಂ.ಭಟ್, ಡಾ.ಕೃಷ್ಣಪ್ಪ ಕೊಂಚಾಡಿ, ಸುನೀಲ್ ಕುಮಾರ್ ಬಜಾಲ್, ಯಾಧವ ಶೆಟ್ಟಿ, ಶ್ಯಾಮರಾಜ್ ಪಟ್ರಮೆ, ಮೊದಲಾದವರು ಆಗಮಿಸಿದ್ದರು. ಶಿಬಿರದಲ್ಲಿ ಪಕ್ಷದ ತಾಲೂಕು ಸಮಿತಿ ಸದಸ್ಯರುಗಳು ಮುಖಂಡರು ಇದ್ದರು.
