ಬೆಳ್ತಂಗಡಿ;ಮುಂಗಾರು ಮಳೆಯ ಪೂರ್ವ ಸಿದ್ಧತೆ ಹಾಗೂ ಪ್ರಾಕೃತಿಕ ವಿಕೋಪದ ತುರ್ತು ಪರಿಹಾರೋಪಾಯಗಳನ್ನು ಕೈಗೊಳ್ಳುವ ಕುರಿತು ಬೆಳ್ತಂಗಡಿ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ತಹಸೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ ಮನೆಗಳ ಸಮೀಪ ಮಣ್ಣು ಅಗೆಯುವುದನ್ನು ಮಾಡಬಾರದು. ನದಿಗಳತ್ತ ತೆರಳುವ ಜನರು ಹಾಗೂ ನದಿ ಪರಿಸರದಲ್ಲಿ ವಾಸಿಸುವವರು ಹೆಚ್ಚಿನ ಮುಂಜಾಗ್ರತೆಯನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಬೇಕು. ಜನರು ಯಾವುದೇ ರೀತಿಯ ಅಪಾಯಗಳನ್ನು ಆಹ್ವಾನಿಸುವ ಕೆಲಸಗಳನ್ನು ಮಾಡಬಾರದು ಎಂದು ಸೂಚಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂಜಾತ್ ಮಾತನಾಡಿ ಜನರು ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಬೇಕು. ತೋಟಗಳಲ್ಲಿ ಹಾಗೂ ಇತರ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು. ಮನೆಗಳ ಸುತ್ತ ಸ್ವಚ್ಛತೆಯನ್ನು ಕಾಪಾಡುವುದು ಅತಿ ಅವಶ್ಯಕ. ಜ್ವರ ಇನ್ನಿತರ ಲಕ್ಷಣಗಳು ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯಬೇಕು ಎಂದು ಹೇಳಿದರು.
ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿಪತ್ತು ನಿರ್ವಹಣಾ ಟಾಸ್ಕ್ ಫೋರ್ಸ್ ಸಭೆಯನ್ನು ಮಾಡಬೇಕು, ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಿ ಭೇಟಿ ನೀಡಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ಮರ, ವಿದ್ಯುತ್ ಕಂಬಗಳ ಬಗ್ಗೆ ಮೆಸ್ಕಾಂ, ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದ ಚರಂಡಿಗಳನ್ನು ದುರಸ್ತಿಗೊಳಿಸಬೇಕು. ಅಗತ್ಯ ಪ್ರದೇಶದಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನ ಮೂಲಗಳನ್ನು ಗುರುತಿಸಿ ಸ್ವಚ್ಛತೆ ನಿರ್ವಹಿಸಬೇಕು. ಕಿಂಡಿ ಅಣೆಕಟ್ಟು ಪರಿಸರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಪಾಯಕಾರಿ ರಸ್ತೆ, ಸೇತುವೆಗಳಲ್ಲಿ ಸಂಚಾರ ನಿರ್ಬಂಧ ಹೇರುವ ಕುರಿತು ಪರಿಶೀಲಿಸಿ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಪ್ರವಾಹ ಪೀಡಿತ ಮತ್ತು ಭೂಕುಸಿತ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಸ್ಥಳಾಂತರಗೊಳಿಸುವ ಬಗ್ಗೆ ಮನವೊಲಿಸಿ ನೋಟಿಸ್ ಜಾರಿ ಮಾಡಿ ಸ್ವೀಕೃತಿ ಪಡೆಯಬೇಕು. ಜಿಲ್ಲಾಧಿಕಾರಿಗಳ ಆದೇಶದಂತೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಯಾವುದೇ ಅಪಾಯದ ಸಂದರ್ಭ ತಕ್ಷಣ ಸೇವೆಗೆ ಸಿದ್ಧರಿರಬೇಕು ಮೊದಲಾದ ಕಾರ್ಯಸೂಚಿಗಳನ್ನು ಸಭೆಯ ಗಮನಕ್ಕೆ ತರಲಾಯಿತು.
ತಾಪಂ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್,ಪಿಡಬ್ಲ್ಯೂಡಿ ಎಇಇ ಬಕ್ಕಪ್ಪ , ತಾಲೂಕು ಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಹಾಗೂ ಗ್ರಾಮ ಕರಣಿಕರು ಉಪಸ್ಥಿತರಿದ್ದರು.











