Home ಅಪರಾಧ ಲೋಕ ಮಂಗಳೂರು;ಆಟವಾಡುತ್ತಿದ್ದ ಹೆಣ್ಣು ಮಗುವಿನ ಅಪಹರಣ; ಎರಡೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಮಂಗಳೂರು;ಆಟವಾಡುತ್ತಿದ್ದ ಹೆಣ್ಣು ಮಗುವಿನ ಅಪಹರಣ; ಎರಡೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

590
0

ಮಂಗಳೂರು: ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಅಪಹರಿಸಿದ ಘಟನೆ ನಗರದ ಪಡೀಲ್‌ ಬಳಿ ಸಂಭವಿಸಿದ್ದು ಕಂಕನಾಡಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೂರು ಬಂದ ಎರಡು ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ಕೇರಳ ಎರ್ನಾಕುಲಂ ಜಿಲ್ಲೆಯ ತಾತಾಪಿಲ್ಲಿ ನಿವಾಸಿ ಅನೀಶ್‌ ಕುಮಾರ್‌(59) ಬಂಧಿತ ಆರೋಪಿ. ಪಡೀಲ್‌ನ ಅರಣ್ಯ ಇಲಾಖೆಯ ಸಸ್ಯಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿಯೇ ಕಾರ್ಮಿಕರ ಶೆಡ್‌ನ‌ಲ್ಲಿ ವಾಸವಾಗಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವಿ ಮೂಲದ ಮಹಿಳೆಯ ಎರಡೂವರೆ ವರ್ಷದ ಹೆಣ್ಣು ಮಗು ಮತ್ತು ಮತ್ತೊಬ್ಬ ಕಾರ್ಮಿಕರ ಹೆಣ್ಣುಮಗು ಅಲ್ಲಿಯೇ ಪಕ್ಕದಲ್ಲಿ ಆಟವಾಡುತ್ತಿದ್ದವು. ಸಂಜೆ 4.30ರ ವೇಳೆಗೆ ನೋಡುವಾಗ ಒಂದು ಮಗು ಕಾಣೆಯಾಗಿತ್ತು. ಹಲವೆಡೆ ಹುಡುಕಾಟ ನಡೆಸಿ ಸುಮಾರು 7.30ಕ್ಕೆ ಕಂಕನಾಡಿ ನಗರ ಠಾಣಾ ಪೊಲೀಸರಿಗೆ ದೂರು ನೀಡಿದರು.

ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾ ನೆರವು



ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿ ಲಭ್ಯ ಸಿಸಿ ಕ್ಯಾಮೆರಾಗಳ ಪರಿಶೀಲಿಸಿದರು. ರೈಲ್ವೆ ನಿಲ್ದಾಣದ ಸಿಸಿ ಕ್ಯಾಮೆರಾವನ್ನು ಪರಿಶೀಲಿಸುವಾಗ ಓರ್ವ ವ್ಯಕ್ತಿ ತನ್ನೊಂದಿಗೆ ಮಗುವನ್ನು ಕರೆದೊಯ್ಯುವುದು ಕಂಡು ಬಂತು. ಕೂಡಲೇ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಲಾಯಿತು.
ಅಲ್ಲಿಗೆ ತೆರಳಿದ ಮಂಗಳೂರಿನ ಪೊಲೀಸರು ಕಾಸರಗೋಡು ಪೊಲೀಸರ ಜತೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಗು ಸಹಿತವಾಗಿ ರಾತ್ರಿ 9.30ಕ್ಕೆ ವಶಕ್ಕೆ ಪಡೆದಿದ್ದಾರೆ. ಮಗು ಸುರಕ್ಷಿತವಾಗಿದ್ದು ಅದನ್ನು ಹೆತ್ತವರಿಗೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

“ಹೆಣ್ಣು ಮಗುವಿನ ಮೇಲಿನ ಆಸೆ’


ಆರೋಪಿ ಅನೀಶ್‌ ಕುಮಾರ್‌(59) ಎರ್ನಾಕುಲಂ ನಿವಾಸಿಯಾಗಿದ್ದು ಈತನನ್ನು ಪೊಲೀಸರು ವಿಚಾರಿಸಿದಾಗ “ನನಗೆ ಮೂವರು ಗಂಡು ಮಕ್ಕಳಿದ್ದಾರೆ. ಹೆಣ್ಣು ಮಕ್ಕಳಿಲ್ಲ. ನಾನು ಮಗುವಿನ ಬಳಿ ಹೋದಾಗ ಅದು ನೋಡಿ ನಗಾಡಿತು. ಅದು ನನ್ನ ಹಿಂದೆ ಬಂತು. ನಾನು ಎತ್ತಿಕೊಂಡು ಬಂದೆ’ ಎಂದು ಉತ್ತರಿಸಿದ್ದಾನೆ ಎಂದು ತಿಳಿದುಬಂದಿದೆ.

ಆರೋಪಿ ಅನೀಶ್‌ ಕುಮಾರ್‌ ವಿವಿಧ ಕಡೆಗಳಿಗೆ ರೈಲಿನಲ್ಲಿ ತಿರುಗಾಡುತ್ತಿದ್ದು ಕೆಲವು ದಿನಗಳ ಹಿಂದೆ ಮುಂಬೈಗೆ ಹೋಗಿ ಬಂದಿದ್ದ. ಶನಿವಾರದಂದು ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಬಂದು ಇಳಿದಿದ್ದ. ಅಲ್ಲಿಂದ ನಗರದ ಕಡೆಗೆ ಬರುತ್ತಿದ್ದಾಗ ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವ ಬಜಾಲ್‌ನಲ್ಲಿ ಮಗುವನ್ನು ಕಂಡು ಅದರ ಹತ್ತಿರ ಹೋಗಿದ್ದ. ಬಳಿಕ ಎತ್ತಿಕೊಂಡು ಬಂದಿದ್ದ. ಈತನ ವಿರುದ್ಧ ಈ ಹಿಂದೆ ಬೇರೆ ಯಾವುದೇ ಪ್ರಕರಣಗಳು ದಾಖಲಾಗಿರುವ ಮಾಹಿತಿ ದೊರೆತಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here