ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಬೋಳಿಯಾರ್ ನಿವಾಸಿ ಸುರೇಂದ್ರನ್ ನಾಯರ್ ಮತ್ತು ಸಿಂಧೂದೇವಿ ದಂಪತಿ ಪುತ್ರಿ ಆಕಾಂಕ್ಷ ಎಸ್ ನಾಯರ್ ಅವರು ಪಂಜಾಬ್ ನಲ್ಲಿ ಅಸಹಜವಾಗಿ ಮೃತಪಟ್ಟ ಘಟನೆಗೆ ಮೇ.17 ಕ್ಕೆ (ಇಂದಿಗೆ) ಒಂದು ವರ್ಷ ತುಂಬುತ್ತಿದೆ. ಮಗಳ ಸಾವಿಗೆ ನಿಖರ ಕಾರಣವೇನು ಎಂಬುದಾಗಿ ಹೆತ್ತವರು ಹಾಗೂ ಕುಟುಂಬಸ್ಥರಿಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ. ಈಗಲೂ ನ್ಯಾಯಕ್ಕಾಗಿ ಹಾತೊರೆಯುತ್ತಿದ್ದಾರೆ, ಅವರ ಕೂಗು ಅರಣ್ಯ ರೋಧನವಾಗಿದೆ.
ಈಮಧ್ಯೆ ಪೋಸ್ಟ್ ಮಾರ್ಟಂ ವರದಿಯಲ್ಲಿ ಆಕೆ ಕಟ್ಟಡದಿಂದ ಹಾರುವ ಮುನ್ನವೇ ಹೃದಯಾಘಾತದಿಂದ ಮತ್ತು ರಕ್ತ ಹೆಪ್ಪುಗಟ್ಟಿ ಮೃತರಾಗಿದ್ದಾರೆ ಎಂದು ಉಲ್ಲೇಖವಿದ್ದು ಇದು ಮನೆಯವರಿಗೆ ಇನ್ನಷ್ಟು ಸಂದೇಹಕ್ಕೆ ಕಾರಣವಾಗಿದೆ. ಆದರೆ ನ್ಯಾಯಕ್ಕಾಗಿ ಏನುಮಾಡಬೇಕು ಎಂದು ತಿಳಿಯದೆ ಕಣ್ಣೀರು ಹಾಕುತ್ತಿದ್ದಾರೆ.
ಪ್ರೊಫೆಸರ್ ಬಂಧನ: ಅಕಾಂಕ್ಷ ಸಾವಿಗೆ ಕಾರಣವಾಗಿದ್ದ ಪ್ರೊಫೆಸರ್ ಬಿಲ್ಜಿ ಮ್ಯಾಥ್ಯೂ ನನ್ನು ಪ್ರಕರಣ ದಾಖಲಾದ ದಿನದಂದು ಪಂಜಾಬ್ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧಿಸಿದ್ದರು ಬಳಿಕ ಕೆಲ ದಿನದಲ್ಲಿಯೇ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಅಂತ ಮಾಹಿತಿ ಇದ್ದು. ಮಗಳನ್ನು ಈತನೇ ಯಾವುದೋ ಉದ್ದೇಶದಿಂದ ಕೊಲೆ ಮಾಡಿರುವ ಅನುಮಾನವಿದೆ ಅಂತ ಸಿಂಧೂದೇವಿ ನೇರ ಆರೋಪ ಮಾಡುತ್ತಿದ್ದಾರೆ. ಆದರೆ ಪೊಲೀಸರ ತನಿಖೆ ಏನಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಗಳು ಕುಟುಂಬಕ್ಕೆ ನೀಡುತ್ತಿಲ್ಲ ಎನ್ನುತ್ತಿದ್ದಾರೆ ಅವರು.

ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಯೂ ಅಲಭ್ಯ:
ಪಂಜಾಬ್ ಲವ್ಲಿ ಪ್ರೊಫೆಷನಲ್ ಯುನಿವರ್ಸಿಟಿ (ಎಲ್.ಪಿ.ಯು) ಇಲ್ಲಿ ಇಂಜಿನಿಯರಿಂಗ್ ನ ಪದವಿ ಓದಿದ್ದ ಆಕಾಂಕ್ಷ ಎಸ್ ನಾಯರ್ ದೆಹಲಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಹೆಚ್ಚಿನ ವಿದ್ಯಾಭ್ಯಾಸ ಮತ್ತು ಉದ್ಯೋಗಕ್ಕಾಗಿ ಜರ್ಮನಿಗೆ ಹೋಗುವ ತಯಾರಿಯಲ್ಲಿ ಅಂತಿಮ ಸರ್ಟಿಫಿಕೆಟ್ ಪಡೆಯಲು ಮೇ.15 ರಂದು ದೆಹಲಿಯಿಂದ ಹೊರಟು ಮೇ.16 ರಂದು ಪಂಜಾಬ್ ಗೆ
ತಲುಪಿದ್ದರು. ಮೇ.17 ಫಗ್ವಾರಾ ಪೊಲೀಸ್ ಠಾಣೆಯಿಂದ ಸಂಜೆ ತಾಯಿಗೆ ಕರೆ ಬಂದು, ನಿಮ್ಮ ಮಗಳು ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಮಾಹಿತಿ ನೀಡಿದ್ದರು.
ಆ ಬಳಿಕದ ವಿದ್ಯಮಾನಗಳಲ್ಲಿ ನಡೆದ ಘಟನೆ ಮತ್ತು ಪೊಲೀಸ್ ಕಾರ್ಯಾಚರಣೆ ಬಗ್ಗೆ ಮನೆಯವರಿಗೆ ಸಂದೇಹ ಬಂದುದರಿಂದ ಮುಖ್ಯ ಮಂತ್ರಿಗಳಿಗೆ, ರಾಜ್ಯದ ಪೊಲೀಸ್‌ಮಹಾ ನಿರ್ದೇಶಕರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ತಮ್ಮ ಮಗಳ ಅಸಹಜ ಸಾವು ಮತ್ತು ಅದಕ್ಕೆ ಸಂಬಂಧಿಸಿದಂತೆ ನಡೆದ ತನಿಖೆಯ ಎಲ್ಲಾ ವಿದ್ಯಾಮಾನಗಳ ದಾಖಲೆಗಳನ್ನು ಬಯಸಿ ಮಾಹಿತಿ ಹಕ್ಕಿನಡಿ ಕೇಳಿದ ಮಾಹಿತಿಗೆ ಇದುವರೆಗೆ ಉತ್ತರ ಲಭಿಸಿಲ್ಲ. ಮರಣೋತ್ತರ ಪರೀಕ್ಷಾ ವರದಿ 8 ತಿಂಗಳ ಬಳಿಕ ಕೈ ಸೇರಿದೆ. ಅದರಲ್ಲಿ ಮತ್ತಷ್ಟು ಸಂದೇಹ ಹೆಚ್ಚಾಗಿದೇ ವಿನಹ ಪರಿಹಾರದ ಭರವಸೆ ಇಲ್ಲ.ಇದೀಗ ಎಫ್.ಎಸ್.ಎಲ್ ರಿಪೋರ್ಟ್, ಆಕೆಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್, ಘಟನೆ ನಡೆದ ಕಾಲೇಜಿನ ಸಿಸಿ ಟಿ.ವಿ ಪುಟೇಜ್ ಗಳು, ಎ.ಸಿ ಯವರು ನಡೆಸಿದ ತನಿಖೆಯ ಅಂಶಗಳು, ಸ್ಥಳ ಮಹಜರು ವಿವರ ಮತ್ತು ಫೋಟೋಗಳು, ಐದು ಜನರ ತನಿಖಾ ತಂಡ ನಡೆಸಿದ ತನಿಖಾ ವಿವರ ಇದೆಲ್ಲವನ್ನೂ ಮಾಹಿತಿ ಹಕ್ಕಿನಡಿ ಬಯಸಿ ಮೃತಳ ತಂದೆ ಪಂಜಾಬ್ ಎಎಸ್‌ಪಿ ಅವರಿಗೆ ಪತ್ರ ಕಳಿಸಿದ್ದಾರೆ. ಮಾಹಿತಿ ಮರು ರವಾನಿಸಲು ಪೆನ್ ಡ್ರೈವ್, ಇವರ ವಿಳಾಸ ಬರೆದ ಕವರ್ ಸಹಿತ ಕಳಿಸಿಕೊಟ್ಟರೂ ಇನ್ನೂ ಪ್ರತಿಕ್ರಿಯೆ ಶೂನ್ಯ. ವಿಚಾರಣೆ ಮಾಡಿದರೆ, ಸೀನಿಯರ್ ಆಥಾರಿಟಿ ಅನುಮತಿ ಬಂದ ಬಳಿಕ ಕಳಿಸಿಕೊಡುತ್ತೇವೆ ಎಂದಷ್ಟೇ ಉತ್ತರ ಬಂದಿದೆ ಎನ್ನುತ್ತಾರೆ ಮನೆಯವರು.
ಹೆತ್ತವರಿಂದ ನಿತ್ಯ ಕಣ್ಣೀರು:
ಒಟ್ಟಾರೆಯಾಗಿ ಹೆತ್ತವರು ತಮ್ಮ ಅತ್ಯಂತ ಪ್ರೀತಿಯ ಮಗಳನ್ನು ಕಳೆದುಕೊಂಡ ದುಃಖದಿಂದ ಇನ್ನೂ ಹೊರಬಂದಿಲ್ಲ. ಪುತ್ರಿಯನ್ನು ಅತ್ಯಂತ ಮುದ್ದಿನಿಂದ ಸಾಕಿದ್ದ ದಂಪತಿ ಆಕೆಯ ವಿದ್ಯಾಭ್ಯಾಸಕ್ಕಾಗಿ ಮನೆಯನ್ನೂ ಕಳೆದುಕೊಳ್ಳುವಷ್ಟು ಸಾಲ ಮಾಡಿದ್ದರು. ಮಗಳು ಬಯಸಿದ ಕ್ಷೇತ್ರದಲ್ಲೇ ಆಕೆಯನ್ನು ಬೆಳೆಸಿ ಉನ್ನತ ಮಟ್ಟಕ್ಕೆ ಏರಿಸುವ ಕನಸು ಕಂಡಿದ್ದರು. ಆದರೆ ವಿಧಿಯ ಬರಹವೇ ಬೇರೆಯಾಗಿತ್ತು.
ಕೇಂದ್ರ ಸಚಿವರ ಭೇಟಿ ಮಾಡಿ ಸಿಬಿಐ ಗೆ ನೀಡಲು ಮನವಿ;
ಕರ್ನಾಟಕದ ಯಾವ ಸಚಿವರು ಮಂತ್ರಿಗಳಿಂದ ಹಾಗೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರಿಂದ ಮಗಳ ಸಾವಿಗೆ ನ್ಯಾಯ ಕೊಡಿಸಲು ಈವರೆಗೆ ಮುಂದೆ ಬಂದಿಲ್ಲ ಹಾಗಿರುವಾಗ ಮುಂದಿನ ತಿಂಗಳ ಅಧಿವೇಶನ ನಡೆಯುವ ವೇಳೆ ದೆಹಲಿಗೆ ತೆರಳಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅವರಲ್ಲಿ ಸಿಬಿಐ ತನಿಖೆ ನಡೆಸಿ ಸಾವಿಗೆ ನಿಖರ ಕಾರಣ ಹೊರಬೇಕೆಂದು ಮನವಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಯಿ ಸಿಂಧೂದೇವಿ ಮತ್ತು ತಂದೆ ಸುರೇಂದ್ರ ನಾಯರ್ ಮಾಹಿತಿ ನೀಡಿದ್ದಾರೆ.




