Home ರಾಜಕೀಯ ಸಮಾಚಾರ ಬೆಳ್ತಂಗಡಿ;  ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಬೆಳ್ತಂಗಡಿ;  ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ವಿವಿದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

5
0


ಬೆಳ್ತಂಗಡಿ; ರೈತರು ವಾಸವಿದ್ದು ಕೃಷಿ ಮಾಡಿದ ಭೂಮಿ ಕಂದಾಯ ಭೂಮಿಯಾಗಲಿ, ಅರಣ್ಯ ಭೂಮಿಯಾಗಲಿ ಅದು ರೈತನ ಭೂಮಿ ಎಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕೇ ವಿನಃ ಅದನ್ನು ಆ ಎರಡು ಇಲಾಖೆಗಳು ಅಳತೆ ಮಾಡಿ ತಮ್ಮದೆಂದು ಸಾಬೀತು ಮಾಡುವುದು ಮೂರ್ಖತನದ ತೀರ್ಮಾನ ಎಂದು ಸಿಪಿಐಎಂ ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಬಿ.ಎಂ.ಭಟ್ ಹೇಳಿದರು.
ಅವರು ಸೋಮವಾರ ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ಅರಣ್ಯವಾಸಿ ರೈತರಿಗೆ ಹಕ್ಕುಪತ್ರ ನೀಡಲು ಅಡ್ಡಿಯಾಗಿರುವ 3 ತಲೆ ಮಾರಿನ ದಾಖಲೆ ನೀಡಬೇಕೆಂಬ ನಿರ್ಭಂದವನ್ನು ತೆಗೆದು ಅರಣ್ಯ ಕಾಯ್ದೆಗೆ ಕೇಂದ್ರ ಸರಕಾರ ತಿದ್ದುಪಡಿ ತಂದು ಹಕ್ಕುತ್ರ ನೀಡಬೇಕೇ ವಿನಃ ಇಲ್ಲಿ ಕಾಂಗ್ರೇಸ್ ಬಿಜೆಪಿಗಳು ತಮ್ಮ ರಾಜಕೀಯ ಬೇಳೆ ಬೆಳೆಸಲು ರೈತರನ್ನು ಬಲಿಪಶು ಮಾಡಬಾರದು ಎಂದರು. ಆದಿವಾಸಿ ಸಮುದಾಯದವರಿಗೂ ಹಕ್ಕುಪತ್ರ ನೀಡದೆ ಅರಣ್ಯ ಹಕ್ಕು ಕಾಯ್ದೆಯನ್ನೇ ಉಲ್ಲಂಘನೆ ಮಾಡುವ ಸರಕಾರದ ನಡೆಗಳ ವಿರುದ್ದ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. 94 ಸಿ, 94ಸಿಸಿ ಅರ್ಜಿಗಳನ್ನು ಅರ್ಜಿದಾರರ ಗಮನಕ್ಕೆ ತಾರದೆ ತಿರಸ್ಕರಿಸಿರುವುದು ಖಂಡನೀಯ ಎಂದ ಅವರು ಆ ಅರ್ಜಿಯ ಮರುಪರಿಶೀಲನೆ ನಡೆಸಿ ವಾಸ ಇರುವ ಬಡವನಿಗೆ ಹಕ್ಕುಪತ್ರ ನೀಡಬೇಕು, ಅಕ್ರಮ ಸಕ್ರಮ ಅರ್ಜಿಗಳಿಗೂ ಮಂಜೂರಾತಿ ನೀಡಬೇಕು ಎಂದರು. ಬೀಡಿ ಕಾರ್ಮಿಕರ ಬಾಕಿ ವೇತನ ಪಾವತಿಯಲ್ಲಾದ ಅವ್ಯವಹಾರ, ಖಾಲಿ ಫಾರಂಗೆ ಸಹಿ ಪಡೆದು ವಂಚನೆ ನಡೆಸಿರುವುದು ಇತ್ಯಾದಿಗಳ ಬಗ್ಗೆ ತನಿಖೆ ನಡೆಸಿ ಕಾರ್ಮಿಕರಿಗೆ ಬಾಕಿ ವೇತನ ಪೂರ್ತಿ ಕೊಡಿಸಿ ನ್ಯಾಯ ಕೊಡಿಸಬೇಕು ಮತ್ತು ಸರಕಾರ ಮಾಲಕರ ಪರ ನಿಂತು ವೇತನವನ್ನು ಹಿಮ್ಮುಖವಾಗಿ ನಿರ್ಧರಿಸಿ ಆದೇಶ ಮಾಡಿದ ವೇತನ ಪ್ರತಿ 1000 ಬೀಡಿಗೆ ರೂ 301.92 ನ್ನು ಕಳೆದ ಒಂದು ವರ್ಷದಿಂದ ಮಾಲಕರಿಂದ ಕೊಡಿಸಲಾಗದಿರುವುದು ನಾಚಿಕೆ ವಿಚಾರ ಎಂದರು.


ಕರ್ನಾಟಕ ಪ್ರಾಂತ ರೈತ ಸಂಘದ (ಕೆ.ಪಿ.ಆರ್.ಎಸ್) ತಾಲೂಕು ಅಧ್ಯಕ್ಷರಾದ ಲಕ್ಷ್ಮಣ ಗೌಡ ಪಾಂಗಳ ಅವರು ರೈತರ ಭೂಮಿಯ ಪ್ಲಾಟಿಂಗನ್ನು ತಕ್ಷಣ ಉಚಿತವಾಗಿ ಮಾಡಿಕೊಡಬೇಕು ಮತ್ತು ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸುವುದು, ನೋಟೀಸು ನೀಡಿ ಬೆದರಿಸುವುದು ನಿಲ್ಲಬೇಕು ಎಂದರು. ರೈತರಿಗೆ ನ್ಯಾಯ ಒದಗಿಸದಿದ್ದಲ್ಲಿ ಅನಿರ್ಧಿಷ್ಟಕಾಲ ದರಣಿ ನಡೆಸುತ್ತೇವೆ ಎಂದರು. ಡಿಸಿಡಿಆರ್ ಭೂಮಿಯನ್ನು ದಲಿತರಿಗೆ ಹಂಚಲಾಗದವರಿಗೆ ದಲಿತರ ಮತ ಕೇಳುವ ಹಕ್ಕಿಲ್ಲ ಎಂದರು
ಹಿರಿಯ ರೈತ ಮುಖಂಡ ಮಾಜಿ ಪಂಚಾಯತು ಸದಸ್ಯ ಶ್ಯಾಮರಾಜ್ ಪಟ್ರಮೆ ಮಾತಾಡಿ ಪಟ್ಟಾ ಜಮೀನಾಗಲಿ, 94ಸಿ ಭೂಮಿಯಾಗಲಿ ಅದರ 9, 11 ಮಾಡಿಸುವ, ಮನೆ ಕಟ್ಟಲು ಪರವಾನಿಗೆ ನೀಡುವ ಸಂಪೂರ್ಣ ಅಧಿಕಾರ ಗ್ರಾಮ ಪಂಚಾಯತಿಗೆ ಇರಬೇಕು ಎಂದ ಅವರು ರೈತರು ಮನೆ ಕಟ್ಟಲು ಕನ್ವರ್ಷನ್ ಕಡ್ಡಾಯ ಎಂಬ ಆದೇಶ ಹಿಂಪಡೆಯಬೇಕು ಎಂದರು.
ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯೆ ಈಶ್ವರಿ ಸ್ವಾಗತಿಸಿ, ಡಿ.ವೈ.ಎಫ್.ಐ ತಾಲೂಕು ಕಾರ್ಯದರ್ಶಿ ಅಭಿಷೇಕ್ ವಂದಿಸಿದರು. ಸರಕಾರಕ್ಕೆ ನೀಡುವ ಮನವಿ ಪ್ರತಿಯನ್ನು ಸಿಪಿಐಎಂ ತಾಲೂಕು ಸಮಿತಿ ಸದಸ್ಯೆ ಜಯಶ್ರೀ ಓದಿದರು. ಹೋರಾಟದ ನೇತೃತ್ವದಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ತಾಲೂಕು ಅಧ್ಯಕ್ಷರಾದ ಸುಕುಮಾರ್ ದಿಡುಪೆ, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಧನಂಜಯ, ಸಲಿಮೋನ್, ವಸಂತ ಟೈಲರ್, ಲಕ್ಷ್ಮಣ ಗೌಡ ಜಾಲು, ವಿಶ್ವನಾಥ ಶಿಬಾಜೆ, ಅಬೂಬಕ್ಕರ್, ಅಶ್ವಿತ, ಶ್ರೇಯ, ಅಪ್ಸ, ರಿಯಾಜ್ ಮಾಂತೂರು ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here