

ಮಂಗಳೂರು: ತನಿಖೆಯ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ ನಡೆದಿದೆ.
ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್ ನಗರ ನಿವಾಸಿ ಕಣ್ಣನ್ ಮಣಿ ಎಂಬಾತನ ಮೇಲೆ ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ನಾಟಕ – ಕೇರಳ ಗಡಿಯ ತಲಪಾಡಿ ಗ್ರಾಮದ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ. ಸ್ಥಳ ಮಹಜರು ಮಾಡುವ ವೇಳೆ ತಪ್ಪಿಸಿಕೊಳ್ಳಲು ಕಣ್ಣನ್ ಮಣಿ ಯತ್ನ ನಡೆಸಿದ್ದ ಎಂದು ಹೇಳಗಿದ್ದು ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಮೂವರು ಆರೋಪಿಗಳ ಬಂಧನ
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ಜ. 17ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಂಧಿಸಿದ್ದರು.
ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಗ್ರಾಮದ ಅಮ್ಮಕೋವಿಲ್ ನಿವಾಸಿ ಮುರುಗಂಡಿ ಥೇವರ್ (36) ಮುಂಬಯಿಯ ಡೊಂಬಿವಿಲಿ ಪಶ್ಚಿಮ ಗೋಪಿನಾಥ್ ಚೌಕ್ ರಾಮ್ಕಾಭಾಯಿ ನಿವಾಸಿ ಯೋಸುವಾ ರಾಜೇಂದ್ರನ್ (35) ಮತ್ತು ಮುಂಬಯಿ ಚೆಂಬೂರು ತಿಲಕ್‌ನಗರ ನಿವಾಸಿ ಕಣ್ಣನ್ ಮಣಿ (36) ಬಂಧಿತ ಆರೋಪಿಗಳು.
ಬಂಧಿತರಿಂದ ಕೃತ್ಯದ ವೇಳೆ ಬಳಸಲಾದ ಫಿಯೆಟ್ ಕಾರು, ಕಳವು ಮಾಡಲಾದ ಎರಡು ಗೋಣಿಚೀಲ ಚಿನ್ನ, ಎರಡು ತಲವಾರು, ಪಿಸ್ತೂಲು, 3 ಸಜೀವ ಮದ್ದು ಗುಂಡುಗಳನ್ನು ಪಡಿಸಿಕೊಳ್ಳಲಾಗಿದೆ