Home ರಾಷ್ಟ್ರ/ರಾಜ್ಯ ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ವರದಿ ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

ಧರ್ಮಸ್ಥಳ 74 ಅಸಹಜ ಸಾವುಗಳ ಪ್ರಕರಣ ವರದಿ ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್ ನಿರ್ದೇಶನ

0

ಬೆಂಗಳೂರು : ಧರ್ಮಸ್ಥಳದಲ್ಲಿ ಮೂರು ದಶಕಗಳ ಅವಧಿಯಲ್ಲಿ ಸಂಭವಿಸಿವೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳಿಗೆ ಸಂಬಂಧಿಸಿದಂತೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಅಸಹಜ ಸಾವುಗಳ ಸಂಬಂಧ ಪ್ರತ್ಯೇಕ ಎಫ್‌ಐಆ‌ರ್ ದಾಖಲಿಸಿ ತನಿಖೆ ನಡೆಸಲು ಎಸ್‌ಐಟಿಗೆ ನಿರ್ದೇಶಿಸುವಂತೆ ಕೋರಿ ಸೌಜನ್ಯಾ ತಾಯಿ ಕುಸುಮವತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಬ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಅರ್ಜಿದಾರರು ಪ್ರಸ್ತಾಪಿಸಿರುವ ಪ್ರಕರಣಗಳು 2002ರಲ್ಲಿ ಸಂಭವಿಸಿದೆ. 74 ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗಿದ್ದು, ಯುಡಿಆರ್ ದಾಖಲಿಸಲಾಗಿದೆ. ಸದ್ಯ ರಚಿಸಲಾಗಿರುವ ವಿಶೇಷ ತನಿಖಾ ದಳಕ್ಕೆ ಪ್ರಕರಣಗಳನ್ನು ವರ್ಗಾಯಿಸುವಂತದ್ದು ಏನೂ ಇಲ್ಲ. ಯುಡಿಆರ್‌ಗಳಿಗೆ ಸಂಬಂಧಿಸಿದಂತೆ ಯಾವುದಾದರೂ ದಾಖಲೆ ಸಲ್ಲಿಸಿದರೆ ಅಥವಾ ದೂರು ದಾಖಲಿಸಿದರೆ, ಅದನ್ನು ತನಿಖೆಗೆ ಒಳಪಡಿಸಲಾಗುವುದು. ಇದೊಂದು ಸಾಮಾನ್ಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿದೆ ಎಂದರು.
ಅರ್ಜಿದಾರರ ಪರ ವಕೀಲ ಎಸ್. ಬಾಲನ್ ವಾದ ಮಂಡಿಸಿ, ಅಸಹಜವಾಗಿ ಮೃತಪಟ್ಟವರ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ. ಪ್ರಕ್ರಿಯೆ ಪಾಲಿಸದೆ ಮೃತದೇಹಗಳ ಸಂಸ್ಕಾರ ಮಾಡಲಾಗಿದೆ. 74. ಅಸಹಜ ಸಾವು ಪ್ರಕರಣಗಳಲ್ಲಿ ಪಂಚನಾಮೆ ಪ್ರಕ್ರಿಯೆ ನಡೆಸಲಾಗಿಲ್ಲ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಪೊಲೀಸರು ಮೃತದೇಹಗಳ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಪಂಚಾಯಿತಿಗೆ ಶಿಫಾರಸು ಮಾಡಿದ್ದಾರೆ. ಶವ ಸಂಸ್ಕಾರ ಮಾಡಿದ್ದಾರೆಯೇ, ಸುಟ್ಟಿದ್ದಾರೆಯೇ ಎಂಬುದರ ಮಾಹಿತಿ ಇಲ್ಲ. ಈ ಸಂಬಂಧ ಎಲ್ಲ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಮೃತದೇಹಗಳನ್ನು ಸಂಸ್ಕಾರ ಮಾಡಲಾಗಿದೆ. ಆದರೆ, ಯಾವುದೇ ಎಫ್‌ಐಆ‌ರ್ ದಾಖಲಿಸಿ, ತನಿಖೆ ನಡೆದಿಲ್ಲ. 74 ಎಫ್‌ಐಆ‌ರ್ ದಾಖಲಿಸಿ, ತನಿಖೆ ನಡೆಸಬೇಕು ಎಂಬುದು ನಮ್ಮ ಕೋರಿಕೆಯಾಗಿದೆ ಎಂದು ತಿಳಿಸಿದರು.

ಅಪರಿಚಿತ ಬಾಲಕಿಯ ಶವವೊಂದು 2002ರ ಮೇ 6ರಂದು ಧರ್ಮಸ್ಥಳ ಸಮೀಪದ ನದಿಯಲ್ಲಿ ಸೇತುವೆ ಬಳಿ ಸಿಕ್ಕಿತ್ತು. ಇದು ಅಸಹಜವಾಗಿದ್ದು, ಸಿಆರ್‌ಪಿಸಿ ಸೆಕ್ಷನ್ 174ರ ಅಡಿ ಮಹಜರು ಪ್ರಕ್ರಿಯೆ ನಡೆಸಬೇಕು. ಆದರೆ, ಮಹಜರು ಪ್ರಕ್ರಿಯೆ ನಡೆಸಿಲ್ಲ. ಮರಣೋತ್ತರ ಪರೀಕ್ಷೆಯಾಗಿಲ್ಲ. ಎಲ್ಲಿ ಶವ ಸಂಸ್ಕಾರ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ ಎಂದರು.

ಆಗ ನ್ಯಾಯಪೀಠ, ತನಿಖಾ ವರದಿ ಎಲ್ಲಿದೆ? ಹಲವು ಅಸಹಜ ಸಾವಿನ ಪ್ರಕರಣದಲ್ಲಿ ತನಿಖೆಯೇ ನಡೆಯುವುದಿಲ್ಲ. ಸಾವಿಗೆ ಕಾರಣ ಏನು ಎಂಬ ಮಾಹಿತಿ ಇರಬೇಕಲ್ಲವೇ? ಎಂದು ಕೇಳಿತು.
ಈ ವೇಳೆ ಬಾಲನ್ ಅವರು, ಎಲ್ಲ ದಾಖಲೆಗಳನ್ನೂ ಸರಕಾರ ನಾಶಪಡಿಸಿದೆ. ಯುಡಿಆರ್ ದಾಖಲಿಸಿದ್ದು, ಸಿಆರ್‌ಪಿಸಿ ಸೆಕ್ಷನ್ 174ರ ಅಡಿ ಪ್ರಕ್ರಿಯೆ ಪಾಲಿಸಲಾಗಿ ಎಸ್‌ಐಟಿ ರಚಿಸಲಾಗಿದೆ. ನಾವು ಪ್ರಸ್ತಾಪಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರ ಏನು ತನಿಖೆ ಮಾಡಿದೆ ಎಂಬುದನ್ನು ತಿಳಿಸಲಿ. ಲಾಡ್ಜ್‌ನಲ್ಲಿ ಇದ್ದ ಬಾಲ ನಾಪತ್ತೆಯಾಗಿದ್ದಳು. ಆನಂತರ, ಮೃತದೇಹ ಪತ್ತೆಯಾಗಿದೆ. ಇದೆಲ್ಲಕ್ಕೂ ಸಂಬಂಧಿಸಿದ ದಾಖಲೆ ಸಲ್ಲಿಸಬೇಕು ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, 74 ಪ್ರಕರಣಗಳಿಗೆ ಸಂಬಂಧಿಸಿದಂತೆ ನಡೆಸಿರುವ ತನಿಖಾ ವರದಿ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜುಲೈ 7ಕ್ಕೆ ಮುಂದೂಡಿತು.

NO COMMENTS

LEAVE A REPLY

Please enter your comment!
Please enter your name here

Exit mobile version