Home ಸ್ಥಳೀಯ ಸಮಾಚಾರ ಬೆಳ್ತಂಗಡಿ ಅರಣ್ಯದೊಳಗಿನ ಆದಿವಾಸಿ ಕುಟುಂಬಗಳಿಗೆ ಬೆಳಕು ನೀಡುವ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರಕಾರ

ಬೆಳ್ತಂಗಡಿ ಅರಣ್ಯದೊಳಗಿನ ಆದಿವಾಸಿ ಕುಟುಂಬಗಳಿಗೆ ಬೆಳಕು ನೀಡುವ ಪ್ರಕ್ರಿಯೆ ಆರಂಭಿಸಿದ ರಾಜ್ಯ ಸರಕಾರ

0

ಬೆಳ್ತಂಗಡಿ;  ಶತಮಾನಗಳಿಂದ ಕತ್ತಲೆಯಲ್ಲಿ ಬದುಕನ್ನು ನಡೆಸುತ್ತಿದ್ದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿ ಕುಟುಂಬಗಳು ಸೇರಿದಂತೆ ಅರಣ್ಯವಾಸಿಗಳಿಗೆ ಕೊನೆಗೂ ಬೆಳಕು ನೀಡುವ ಪ್ರಕ್ರಿಯೆ ರಾಜ್ಯ ಸರಕಾರದಿಂದ ನಡೆಯುತ್ತಿದೆ. ಇದೀಗ ಮೊದಲ ಬಾರಿಗೆ ಮೆಸ್ಕಾ ಮೂಲಕ ವಿದ್ಯುತ್ ಸಂಪರ್ಕ ಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದ್ದು ಇದು ಸಧ್ಯದಲ್ಲಿಯೇ ಅನುಮೋದನೆಗೊಳ್ಳುವ ನಿರೀಕ್ಷೆಯಿದೆ. ಕತ್ತಲಲ್ಲಿರುವ ಆದಿವಾಸಿ ಕುಟುಂಬಗಳು ಬೆಳಕನ್ನು ಕಾಣುವ ದಿನ ದೂರವಿಲ್ಲ.

ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಾಸಿಗಳು ವಿದ್ಯುತ್ ಬೆಳಕು ಕಾಣದೆ ಕತ್ತಲೆಯಲ್ಲಿರುವ ಬಗ್ಗೆ ಅವರ ಸಂಕಷ್ಟಗಳ ಬಗ್ಗೆ  ಸಂಘಟನೆಗಳು ನಿರಂತರ ಹೋರಾಟಗಳನ್ನೂ ನಡೆಸಿತ್ತು. ಇದೆಲ್ಲದ ಫಲವಾಗಿ
2024 ರ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಖುದ್ದಾಗಿ ಆದಿವಾಸಿ ಮುಖಂಡರು , ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಆದಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಎಲ್ಲ ಇಲಾಖೆಗಳು ಒಟ್ಟಾಗಿ ಶ್ರಮಿಸುವಂತೆ ಸೂಚನೆ ನೀಡಿದ್ದರು. ಆ ಬಳಿಕ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಸಭೆ ನಡೆದ ಬಳಿಕ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ಆರಂಭಗೊಂಡಿತ್ತು.
ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾರಾವಿ , ಕುತ್ಲೂರು , ನಾವರ , ಸುಲ್ಕೇರಿಮೊಗ್ರು , ಶಿರ್ಲಾಲು , ಸವಣಾಲು , ನಡ , ನಾವೂರು , ಮಲವಂತಿಗೆ ಹೀಗೆ 9 ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುತ್ತದೆ. ಇದರಲ್ಲಿ ನಡ , ಶಿರ್ಲಾಲು ಗ್ರಾಮಗಳಲ್ಲಿ ಈಗಾಗಲೇ ಪೂರ್ಣ ಪ್ರಮಾಣದ ವಿದ್ಯುತ್ ಸಂಪರ್ಕಗೊಂಡಿದ್ದು , ಸುಲ್ಕೇರಿಮೊಗ್ರು ಗ್ರಾಮದಲ್ಲಿ 2016ರಿಂದ ಆರಂಭವಾದ ಪ್ರಯತ್ನದ ಫಲವಾಗಿ ಮೊದಲನೇ ಹಂತದ ವಿದ್ಯುತ್ ಸಂಪರ್ಕ ಕಾಮಗಾರಿ ಪೂರ್ಣಗೊಂಡು , ಇದೀಗ ಎರಡನೇ ಹಂತದ ವಿದ್ಯುತ್ ಕಾಮಗಾರಿ ನಡೆಯುತ್ತಿದೆ. ಒಂದೆರಡು ವಾರಗಳಲ್ಲಿ ಕಾಮಗಾರಿ ಮುಕ್ತಾಯಗೊಂಡು ಇಲ್ಲಿನ ಎಲ್ಲ ಕುಟುಂಬಗಳಿಗು , ವಿದ್ಯುತ್ ಸಂಪರ್ಕ ಸಿಗಲಿದೆ. ಇನ್ನುಳಿದಂತೆ 6 ಗ್ರಾಮಗಳು ವಿದ್ಯುತ್ ಕಾಣದ ಕತ್ತಲ ಲೋಕದಲ್ಲಿ ಮುಂದುವರಿದಿದೆ. ಇದರಲ್ಲಿ ನಾವೂರು ಗ್ರಾಮದಲ್ಲಿ ಹಲವು ಮನೆಗಳಿಗೆ ದಶಕದ ಹಿಂದೆಯೇ ವಿದ್ಯುತ್ ಸಂಪರ್ಕ ನೀಡದೆ ಮೀಟರ್ ಗಳನ್ನು ಅಳವಡಿಸುವ ವಿಚಿತ್ರ ಕಾರ್ಯವೂ ನಡೆದಿತ್ತು.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಬೆಳ್ತಂಗಡಿ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಾರಾವಿ, ಕುತ್ಲೂರು, ನಾವರ, ಸವಣಾಲು, ನಾವೂರು, ಮಲವಂತಿಗೆ ಈ ಆರು ಗ್ರಾಮಗಳಲ್ಲಿ ಅರಣ್ಯ , ಕಂದಾಯ , ಮೆಸ್ಕಾಂ ಇಲಾಖೆಗಳು ಜಂಟಿ ಸರ್ವೆ ಕಾರ್ಯ ನಡೆಸಿ , ಪ್ರಮುಖ ದಾಖಲೆಗಳನ್ನು ಸಂಗ್ರಹಿಸಿ , ನಂತರ ಖಾಸಗಿ ಏಜೆನ್ಸಿ ಮೂಲಕ 2025ರಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಅರ್ಜಿಗೆ ಸಂಬಂಧಿಸಿದಂತೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ಅನುಮತಿಗಾಗಿ ರಾಷ್ಟ್ರೀಯ ಪರಿಸರ ಮಂಡಳಿಗೆ ರವಾನೆಯಾಗಿದ್ದು , ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿಯು ಅರ್ಜಿ ಸಲ್ಲಿಕೆ ಮಾಡಲಾಗಿದೆ. ಏಕಕಾಲದಲ್ಲಿ ಎಲ್ಲಾ ಗ್ರಾಮಗಳ ಅರ್ಜಿಗಳು ಸಲ್ಲಿಕೆಯಾಗಿರುವುದರಿಂದ ಮತ್ತು ರಾಜ್ಯ ಸರ್ಕಾರದ ವಿಶೇಷ ಮುತುವರ್ಜಿಯಿಂದ ತ್ವರಿತವಾಗಿ ಅನುಮತಿ ಸಿಗಬಹುದು ಎಂದು ಮೆಸ್ಕಾಂ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ ಅರಣ್ಯ ಇಲಾಖೆಯವರೂ ಅನುಮತಿ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.
ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದಲೂ ನಡೆಯುತ್ತಿರುವ ಪ್ರಯತ್ನಗಳಿಗೆ ಕೊನೆಗೂ ಯಶಸ್ಸು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಅರಣ್ಯ ವಾಸಿಗಳು.

ರಾಜ್ಯ ಸರಕಾರದ ಪ್ರಯತ್ನ ಅಭಿನಂದನೀಯ ಜಯಾನಂದ ಪಿಲಿಕಲ

ಶತಮಾನಗಳಿಂದ ಸಂವಿಧಾನಬದ್ಧ ವಿದ್ಯುತ್ , ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಈ ಮಣ್ಣಿನ ಮೂಲನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ವಿಶೇಷ ಮುತುವರ್ಜಿ ವಹಿಸುತ್ತಿದೆ. ಹತ್ತಾರು ವರ್ಷಗಳಿಂದ ನಡೆಯುತ್ತಿದ್ದ ನಮ್ಮ ಹೋರಾಟ ಇಂದು ಫಲ ಕೊಡುತ್ತಿರುವುದು ಸಂತಸ ತಂದಿದೆ. ಆದಷ್ಟು ಬೇಗ ಮೂಲನಿವಾಸಿಗಳ ಕತ್ತಲ ಲೋಕದ ಬದುಕಿಗೆ ಬೆಳಕು ಹರಿಸುವ ಕೆಲಸವಾಗಲಿ

NO COMMENTS

LEAVE A REPLY

Please enter your comment!
Please enter your name here

Exit mobile version