
ಬೆಳ್ತಂಗಡಿ; ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆಎಸ್ಸಾರ್ಟಿಸಿ ಬಸ್ ಗೆ ಡಿಕ್ಕಿ ಹೊಡೆದು,ಧರೆಗೆ ಗುದ್ದಿ ಪಲ್ಟಿಯಾದ ಘಟನೆ ಶನಿವಾರ ನಡೆದಿದೆ.
ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿ ಹಾಸನದಿಂದ ಮಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ ಕಾರು ಏಕಾಏಕಿ ರಸ್ತೆಯ ಬಲಬದಿಗೆ ಚಲಿಸಿ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಧರ್ಮಸ್ಥಳದಿಂದ ಕುಕನೂರಿಗೆ ಸಂಚಾರ ನಡೆಸುವ ಕೆಎಸ್ಸಾರ್ಟಿಸಿ
ಬಸ್ ನ ಎಡಬದಿಗೆ ಡಿಕ್ಕಿ ಹೊಡೆದು ಸುಮಾರು 50 ಮೀ.ದೂರದವರೆಗೆ ಹೋಗಿ ಧರೆಗೆ ಗುದ್ದಿ ಉರುಳಿ ಬಿತ್ತು. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಾರಿನ ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಸಿಲುಕಿದ್ದ ಮೂವರನ್ನು ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರು.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಬಸ್ ಪ್ರಯಾಣಿಕರನ್ನು ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರ ಬಸ್ ಗಳಲ್ಲಿ ಕಳುಹಿಸಿಕೊಡಲಾಯಿತು.