
ಬೆಳ್ತಂಗಡಿ: ನೈಸರ್ಗಿಕ ರಬ್ಬರ್ ಬೆಳೆಯನ್ನು ನಿಗದಿತ ಕೃಷಿ ಬೆಳೆಗಳ ಪಟ್ಟಿಯಲ್ಲಿ ಸೇರಿಸುವಂತೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಅಥವಾ ನ್ಯಾಯಸಮ್ಮತ ಲಾಭದಾಯಕ ಬೆಲೆಯನ್ನು (ಎಫ್‌ಆರ್‌ಪಿ) ನಿಗದಿಗೊಳಿಸುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಂಧ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ ಗೋಯಲ್ ಅವರಿಗೆ ಪತ್ರವನ್ನು ಬರೆದಿರುವ ಗುಂಡೂರಾವ್, ದ.ಕ. ಜಿಲ್ಲೆಯ ಹಲವಾರು ರೈತರು ರಬ್ಬರ್ ಕೃಷಿಯಲ್ಲಿ ತೊಡಗಿಕೊಂಡಿರುವುದು ನಿಮಗೆ ಗೊತ್ತಿರಬಹುದು. ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದಾಗಿ ರೈತರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಉತ್ಪಾದನಾ ವೆಚ್ಚವು ಬೇಡಿಕೆಯ ಬೆಲೆಗಿಂತ ಹೆಚ್ಚಾಗಿರುವುದರಿಂದ ಅವರು ಬಡತನದ ಅಂಚಿನಲ್ಲಿದ್ದಾರೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗವು ಎಂಎಸ್‌ಪಿಗಾಗಿ ಶಿಫಾರಸು ಮಾಡುವ ಕೃಷಿ ಬೆಳೆಗಳ ಪಟ್ಟಿಯಿಂದ ನೈಸರ್ಗಿಕ ರಬ್ಬರ್ ನ್ನು ಹೊರಗಿರಿಸಲಾಗಿದೆ. ಹೀಗಾಗಿ ಸಣಬು ಮತ್ತು ಕೊಬ್ಬರಿಯಂತಹ ವಾಣಿಜ್ಯ ಬೆಳೆಗಳು ಪಟ್ಟಿಯಲ್ಲಿ ಸೇರಿದ್ದರೂ ಭಾರತದಲ್ಲಿ ರಬ್ಬರ್‌ಗೆ ಎಂಎಸ್‌ಪಿ ಇಲ್ಲ. ಇದು ನೈಸರ್ಗಿಕ ರಬ್ಬರ್ ಬೆಳೆಗಾರರ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ ಎಂದು ಹೇಳಿದ್ದಾರೆ.
ನೈಸರ್ಗಿಕ ರಬ್ಬರ್‌ನ್ನು ಕೈಗಾರಿಕಾ ಉದ್ದೇಶಗಳಿಗಾಗಿ ಕಚ್ಚಾ ವಸ್ತುವನ್ನಾಗಿ ಮಾತ್ರ ಬಳಸುವುದರಿಂದ ಅದನ್ನು ಕೃಷಿ ಉತ್ಪನ್ನವನ್ನಾಗಿ ಪರಿಗಣಿಸಲಾಗುವುದಿಲ್ಲ ಎಂದು ಸಹಾಯಕ ಕೃಷಿ ಮತ್ತು ರೈತ ಕಲ್ಯಾಣ ಸಚಿವರು 2024 ಜುಲೈ 30ರಂದು ಲೋಕಸಭೆಯಲ್ಲಿ ಉತ್ತರಿಸಿದ್ದರು. ಇದರಿಂದಾಗಿ ರೈತರು ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ ಮತ್ತು ಯಾವುದೇ ಸಣ್ಣ ಏರಿಳಿತಗಳು ಕೂಡ ದ.ಕ. ಜಿಲ್ಲೆಯ ರೈತರಿಗೆ ಪ್ರತಿಕೂಲ ಆರ್ಥಿಕ ಪರಿಣಾಮಗಳು ಮತ್ತು ಸಂಕಷ್ಟಕ್ಕೆ ಕಾರಣವಾಗುತ್ತವೆ
ಎಂದು ಗುಂಡೂರಾವ್ ಪತ್ರದ ಮೂಲಕ ಕೇಂದ್ರ ಸಚಿವರ ಗಮನ ಸೆಳೆದಿದ್ದಾರೆ
ವಾಣಿಜ್ಯ ಇಲಾಖೆಯು ಮಾರ್ಚ್ 2019ರಲ್ಲಿ ರಾಷ್ಟ್ರೀಯ ರಬ್ಬರ್ ನೀತಿಯನ್ನು ತಂದಿದ್ದರೂ ಫಲಿತಾಂಶಗಳು ಅಪೇಕ್ಷಿತ ಮಟ್ಟದಲ್ಲಿಲ್ಲ ಮತ್ತು ಮಾರುಕಟ್ಟೆಯಲ್ಲಿನ ನ್ಯೂನತೆಗಳು, ಬಾಹ್ಯ ವ್ಯಾಪಾರ, ಅಗ್ಗದ ಆಮದುಗಳು, ಸಂಶೋಧನೆಯ ಕೊರತೆ ಇತ್ಯಾದಿ ಕಾರಣಗಳಿಂದ ಬೆಳೆಗಾರರನ್ನು ಬೆಂಬಲಿಸುವುದಿಲ್ಲ ಎನ್ನುವುದನ್ನು ಇಲ್ಲಿ ಉಲ್ಲೇಖಿಸುವುದು ಅಗತ್ಯವಾಗಿದೆ. 1947ರ ರಬ್ಬರ್ ಕಾಯ್ದೆಯ ನಿಬಂಧನೆಗಳಿಂದಾಗಿ ರಬ್ಬರ್ ಕೃಷಿ ಸೇರಿದಂತೆ ರಬ್ಬರ್ ಉದ್ಯಮದ ಅಭಿವೃದ್ಧಿಯು ಸಂಪೂರ್ಣವಾಗಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ. ಆದ್ದರಿಂದ ಭಾರತೀಯ ರಬ್ಬರ್ ಮಂಡಳಿಯು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಡಿ ಕಾರ್ಯ ನಿರ್ವಹಿಸುತ್ತದೆ. ಕೇಂದ್ರ ಸರಕಾರವು ರಬ್ಬರ್ ಉದ್ಯಮದ ಮೇಲೆ ಏಕೀಕೃತ ಮತ್ತು ಸಂಪೂರ್ಣ ನಿಯಂತ್ರಣವನ್ನು ಹೊಂದಿರುವುದರಿಂದ ಅದು ರಬ್ಬರ್ ಉದ್ಯಮದಲ್ಲಿ ರಾಜ್ಯಗಳು ಹಸ್ತಕ್ಷೇಪ ಮಾಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಹೀಗಾಗಿ ಎಂಎಸ್‌ಪಿಯ ಈ ಸಮಸ್ಯೆಯನ್ನು ಕೇಂದ್ರ ಸರಕಾರವೇ ಪರಿಹರಿಸಬೇಕೇ ಹೊರತು ರಾಜ್ಯಗಳಲ್ಲ ಎಂದು ಗುಂಡೂರಾವ್ ಬೆಟ್ಟು ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಗದಿತ ಕೃಷಿ ಬೆಳೆಗಳ ಪಟ್ಟಿಯಲ್ಲಿ ನೈಸರ್ಗಿಕ ರಬ್ಬರ್‌ನ್ನು ಸೇರಿಸಲು ಕೇಂದ್ರ ಸರಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಎಂಎಸ್‌ಪಿ ಅಥವಾ ಎಫ್‌ಆರ್‌ಪಿ ಯನ್ನು ನಿಗದಿಗೊಳಿಸಬೇಕು ಎಂದು ವಿನಂತಿಸಿಕೊಂಡಿರುವ ಅವರು, ಕೇಂದ್ರವು ನೈಸರ್ಗಿಕ ರೈತರ ಗಂಭೀರ ಪರಿಸ್ಥಿತಿಯನ್ನು ಅರಿತುಕೊಳ್ಳುತ್ತದೆ ಮತ್ತು ಅದಕ್ಕೆ ತಕ್ಕಂತೆ ಸ್ಪಂದಿಸುತ್ತದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.