
ಬೆಳ್ತಂಗಡಿ; ಅಸಮಾನತೆಯ ಸಮಾಜದಲ್ಲಿ ಸರ್ವರಿಗೂ ಸಮಾನತೆ , ಸಾಮಾಜಿಕ , ಆರ್ಥಿಕ ನ್ಯಾಯವನ್ನು ಒದಗಿಸಿದ ಮಹತ್ವದ ಗ್ರಂಥ ನಮ್ಮ ಸಂವಿಧಾನ. ಸಂವಿಧಾನದ ಆಶಯಗಳು ಪ್ರಸ್ತುತ ದೇಶಕ್ಕೆ ಅಗತ್ಯವಿದೆ. ಭವಿಷ್ಯದ ಭಾರತಕ್ಕೂ ದೇಶದ ಸಂವಿಧಾನದ ಆಶಯಗಳು ಬಹಳ ಅಗತ್ಯವಿದ್ದು , ಅದನ್ನು ಮುಂದಕ್ಕೆ ಒಯ್ಯುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನೆಹರು ಚಿಂತನ ಕೇಂದ್ರದ ಸಂಶೋಧನಾ ಸಹಾಯಕಿ ಡಾ. ನಯನ ಕೃಷ್ಣಾಪುರ ಹೇಳಿದರು.
ಅವರು ಬೆಳ್ತಂಗಡಿಯ ಶ್ರೀ ಮಂಜುನಾಥ ಕಲಾ ಭವನದಲ್ಲಿ ತಾಲೂಕು ಆಡಳಿತ , ತಾಲೂಕು ಪಂಚಾಯತ್ , ಪಟ್ಟಣ ಪಂಚಾಯತ್ , ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಡೆದ ಭಾರತ ಸಂವಿಧಾನ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಜಿಲ್ಲಾ ಕೆಡಿಪಿ ಸದಸ್ಯ , ನ್ಯಾಯವಾದಿ ಸಂತೋಷ್ ಕುಮಾರ್ ಲಾಯಿಲ ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಯು ಸ್ವತಂತ್ರವಾಗಿ ಬದುಕುವ ಅವಕಾಶವನ್ನು ದೇಶದ ಸಂವಿಧಾನ ನೀಡಿದೆ. ಆದರೆ ಇಂದು ನಾವು ತಿನ್ನುವ ಆಹಾರವನ್ನು ಇನ್ನೊಬ್ಬರು ನಿರ್ಧರಿಸುವಂತಾಗಿದೆ. ಬಹು ಆಹಾರ ಸಂಸ್ಕೃತಿಯೂ ಬಹು ಸಂಸ್ಕೃತಿಯ ಭಾಗವಾಗಿದೆ ಅದನ್ನು ಆಯ್ದುಕೊಳ್ಳುಔಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದ ಅವರು ಸಂವಿಧಾನ ಯಾರ ಮೇಲೂ ಹೇರಿಕೆಯಾಗಿಲ್ಲ , ಬದಲಾಗಿ ನಮಗೆ ನಾವೇ ಅರ್ಪಿಸಿಕೊಂಡಿರುವ ಸಂವಿಧಾನ ನಮ್ಮ ದೇಶದ ಸಂವಿಧಾನ ಎಂದರು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ಉದ್ಘಾಟಿಸಿದರು
ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ , ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ , ಉಪ ತಹಶೀಲ್ದಾರ್ ಶ್ರೀಮತಿ ಜಯಾ , ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ , ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ , ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಮೊದಲು ತಾಲೂಕು ಆಡಳಿತ ಸೌಧದಿಂದ ಸಭಾಭವನದ ವರೆಗೆ ಸಂವಿಧಾನ ಸಂರಕ್ಷಣಾ ಜಾಥ ನಡೆಯಿತು. ಕಾರ್ಯಕ್ರಮದ ಭಾಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.ಮುಖ್ಯ ಭಾಷಣಕಾರರಾದ ಡಾ. ನಯನ ಕೃಷ್ಣಾಪುರ ರವರನ್ನು ಸನ್ಮಾನಿಸಲಾಯಿತು.
ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲ ಮುರಳೀಧರ್ ಜಿ.ಎಸ್ ಸ್ವಾಗತಿಸಿ , ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿಶಾಲೆಯ ಶಿಕ್ಷಕ , ಸಾಹಿತಿ ಅರವಿಂದ ಚೊಕ್ಕಡಿ ಪ್ರಾಸ್ತಾವಿಕವಾಗಿ ಮಾತನಾಡಿದರುತಾಲೂಕು ಐಟಿಡಿಪಿ ವಿಸ್ತಾರಣಾಧಿಕಾರಿ ಹೇಮಾಲತಾ ಕಾರ್ಯಕ್ರಮ ನಿರೂಪಿಸಿ , ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ ಲಾಯಿಲ ವಂದಸಿದರು.