Home ರಾಷ್ಟ್ರ/ರಾಜ್ಯ ಬೆಳ್ತಂಗಡಿ; ಡಿ.16ರಂದು “ಕೊಂದವರು ಯಾರು” ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾ

ಬೆಳ್ತಂಗಡಿ; ಡಿ.16ರಂದು “ಕೊಂದವರು ಯಾರು” ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾ

0

ಬೆಳ್ತಂಗಡಿ; ದೆಹಲಿಯ ನಿರ್ಭಯ ಪ್ರಕರಣದ ದಿನವಾದ ಡಿ. 16ರಂದು ಅತ್ಯಾಚಾರ ವಿರೋಧಿ ದಿನ ಆಚರಣೆಯ ಹಿನ್ನೆಲೆಯಲ್ಲಿ ಬೆಳ್ತಂಗಡಿಯಲ್ಲಿ ‘ಕೊಂದವರು ಯಾರು’ ಎಂಬ ಮಹಿಳಾ ನ್ಯಾಯ ಸಮಾವೇಶ ಮತ್ತು ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಮಹಿಳೆಯರ ಅತ್ಯಾಚಾರ ಕೊಲೆ ಮಾಡಿದವರು ಯಾರು ಎಂಬ ಸತ್ಯವನ್ನು ಹೊರತರುವ ದಿಕ್ಕಿನಲ್ಲಿ ಎಸ್‌ಐಟಿ ತನಿಖೆ ನಡೆಯಬೇಕು ಎಂದು ಒತ್ತಾಯ ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸುವ ನಿಟ್ಟಿನಲ್ಲಿ ಈ ಸಮಾವೇಶ ಹಾಗೂ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೊಂದವರು ಯಾರು ಎಂಬ ಆಂದೋಲನ ಆಗಸ್ಟ್‌ನಲ್ಲಿ ಆರಂಭಿಸಲಾಗಿದೆ. ಧರ್ಮಸ್ಥಳದಲ್ಲಿ ನಡೆದ ಪ್ರಕರಣಳ ಸಂತ್ರಸ್ತರ ಕುಟುಂಬಗಳೊಂದಿಗೆ ನಿಲ್ಲುವುದು ನಮ್ಮ ಉದ್ದೇಶ ಎಂದರು.

ಎಸ್.ಐ.ಟಿ ಗೆ ದೂರು ನೀಡಿದ ಹಾಗೂ ನೊಂದವರ ಕುಟುಂಬಗಳನ್ನು ನಾವು ಸಂಪರ್ಕಿಸಿ ಸಾಂತ್ವಾನ ಹೇಳಿದ್ದೇವೆ.

ಎಸ್‌ಐಟಿಯಿಂದ ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದ್ದು ಸರಕಾರದ ಮೇಲೆ ಒತ್ತಡ ರುವ ನಿಟ್ಟಿನಲ್ಲಿ ಈ ಹೋರಾಟ ನಡೆಯಲಿದೆ ಎಂದು ಅಭಿಯಾನದ ಸದಸ್ಯೆ ಮಲ್ಲಿಗೆ ತಿಳಿಸಿದರು.
ಎಸ್‌ಐಟ ರಜನಿಯ ಆದೇಶವು ಸ್ಪಷ್ಟವಾಗಿ ಹೇಳುವಂತೆ ವಿಚಾರಣೆ ಕೇವಲ ಸಾಮೂಹಿಕ ಹೆಣ ಹೂಳುವಿಕೆಯ ಕುರಿತಾಗಿ ಮಾತ್ರವಲ್ಲ.
ಇನ್ನಿತರ ಎಲ್ಲ ವಿಚಾರಗಳ ಸಮಗ್ರ ತನಿಖೆ ನಡೆಸಬೇಕು ಎಂಬುದು ನಮ್ಮ ಆಗ್ರಹ. ಎಸ್‌ಐಟಿ ವಿಚಾರಣೆಯು ಸಂಪೂರ್ಣವಾಗಿ ಮಹಿಳೆಯರು ಮತ್ತಿತರ ಅಮಾಯಕ ನೊಂದವರಿಗೆ ನ್ಯಾಯ ದೊರಕುವ ಸುತ್ತ ಕೇಂದ್ರೀಕೃತವಾಗಿರಬೇಕೇ ಹೊರತು ಧಾರ್ಮಿಕ ಅಥವಾ ರಾಜಕೀಯ ವಿಚಾರಗಳ ಸುತ್ತ ಅಲ್ಲ ಎಂಬುದನ್ನು ಗಟ್ಟಿದನಿಯಲ್ಲಿ ನಾವು ಪ್ರತಿಪಾದಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಅಭಿಯಾನದ ಸದಸ್ಯೆ ಜ್ಯೋತಿ ಮಾತನಾಡಿ, ಎಸ್.ಐಟಿಯಿಂದ ಪ್ರಾಮಾಣಿಕ ತನಿಖೆ ನಡೆಸಬೇಕು. ಈ ಬಗ್ಗೆ ಮುಖ್ಯಮಂತ್ರಿ ಅವರನ್ನು ಮಹಿಳಾ ನಿಯೋಗ ಭೇಟಿ ಮಾಡಿ ಒತ್ತಾಯಿಸಿದ್ದು ಪ್ರಾಮಾಣಿಕ ತನಿಖೆಯ ಭರವಸೆ ನೀಡಿದ್ದಾರೆ ಎಂದರು.
ಗೋಷ್ಟಿಯಲ್ಲಿ ರೈತ ಸಂಘದ ಮುಖಂಡೆ ಅನಸೂಯಮ್ಮ ಅರಲಾಲುಸಂದ್ರ, ಕಲಾವಿದೆ ಮತ್ತು ಲೇಖಕಿ ಗೀತಾ ಸುರತ್ಕಲ್, ಸೌಜನ್ಯ ಪರ ಹೋರಾಟಗಾರರಾದ ಶಶಿಕಲಾ, ಮಹಿಳಾ ಪರ ಹೋರಾಟಗಾರರಾದ ಸುನೀತಾ ಲಂಬಾಣಿ, ಭಾಗ್ಯಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version