ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದಲ್ಲಿ 1990ರಿಂದ 2021ರ ನಡುವೆ ಸಂಭವಿಸಿದೆ ಎನ್ನಲಾದ ಅಸಹಜ ಸಾವು ಪ್ರಕರಣಗಳಲ್ಲಿ ಅನಾಧ ಶವಗಳು ಪತ್ತೆಯಾಗಿದ್ದು ವಾರಿಸುದಾರರು ಪತ್ತೆಯಾಗದೆ ಹೂತುಹಾಕಲಾಗಿರುವ ಎಲ್ಲ 74 ಅನಾಥ ಶವಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ನಿರ್ದೇಶ ನೀಡುವಂತೆ ಕೋರಿ ಸೌಜನ್ಯ ತಾಯಿ ಕುಸುಮಾವತಿ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿಯನ್ನು ಪ್ರತಿವಾದಿಯನ್ನಾಗಿಸಲಾಗಿದ್ದು ಅರ್ಜಿಯು ಇನ್ನಷ್ಟೇ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಿದೆ.
ಕಳೆದ 31 ವರ್ಷಗಳಲ್ಲಿ ಸಂಭವಿಸಿದೆ ಎನ್ನಲಾದ 74 ಅಸಹಜ ಸಾವು ಪ್ರಕರಣಗಳ (ಯುಡಿಆರ್) ಸಂಬಂಧ ಪ್ರತ್ಯೇಕ ಎಫ್ಐಆರ್ ದಾಖಲಿಸಿ, ಸಮಗ್ರ ತನಿಖೆ ನಡೆಸುವಂತೆ ಕೋರಿ ಅರ್ಜಿದಾರರು ಹಾಗೂ ಇತರ ಬಾಧಿತ ಕುಟುಂಬಗಳ ವತಿಯಿಂದ 2025ರ ಅಕ್ಟೋಬರ್ 11ರಂದು ಎಸ್‌ಐಟಿಗೆ ಲಿಖಿತವಾಗಿ ಮನವಿ ಸಲ್ಲಿಸಲಾಗಿತ್ತು. ಎಲ್ಲ 74 ಪ್ರಕರಣಗಳಿಗೆ ಸಂಬಂಧಿಸಿದ ದಿನಾಂಕ, ಸ್ಥಳ, ಯುಡಿಆರ್ ಸಂಖ್ಯೆ, ಸಮಾಧಿಯ ಸ್ಥಳಗಳು ಇನ್ನಿತರ ಮಾಹಿತಿಯೊಳಗೊಂಡ ಸಂಪೂರ್ಣ ವಿವರಗಳನ್ನು ಒದಗಿಸಲಾಗಿತ್ತು. ಆದರೆ, ಎಸ್‌ಐಟಿ ಅಧಿಕಾರಿಗಳು ನಮ್ಮ ಮನವಿ ಆಧರಿಸಿ ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ವಿಶೇಷ ತನಿಖಾ ತಂಡದ ಕೆಲಸವನ್ನು ಪ್ರಶ್ನಿಸಲು, ಟೀಕಿಸಲು ಅಥವಾ ಅದರಲ್ಲಿ ಹಸ್ತಕ್ಷೇಪ ಮಾಡಲು ಈ ಪಿಐಎಲ್ ಸಲ್ಲಿಸಲಾಗಿಲ್ಲ. ಬದಲಿಗೆ ರಾಜಕೀಯ, ಸಾಮಾಜಿಕ ಅಥವಾ ಬಾಹ್ಯ ಒತ್ತಡಗಳಿಂದ ಮುಕ್ತವಾಗಿ, ಪರಿಣಾಮಕಾರಿ ಮತ್ತು ವ್ಯವಸ್ಥಿತವಾಗಿ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಲು ಎಸ್‌ಐಟಿಗೆ ನ್ಯಾಯಾಲಯ ನಿರ್ದೇಶಿಸಬೇಕು. ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದರೆ ತನಿಖೆಯಲ್ಲಿ ಲೋಪಗಳಾಗದಂತೆ ಹಾಗೂ ಮತ್ತೆ ತನಿಖೆ ಹಳಿತಪ್ಪದಂತೆ ನೋಡಿಕೊಳ್ಳಬಹುದಾಗಿದ್ದು, ಇದಕ್ಕಾಗಿ ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.
