ಬೆಳ್ತಂಗಡಿ: ಪುತ್ತೂರಿನಲ್ಲಿ ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಎ.ಎಸ್.ಐ. ಚಿದಾನಂದ ರೈ ಮತ್ತು ಪಿಸಿ ಶ್ರೀಶೈಲ ಎಂ.ಕೆ ಅವರನ್ನು ಕರ್ತವ್ಯದಿಂದ ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ.
ಅ.17ರಂದು ಆಟೋ ಚಾಲಕ ಬಶೀರ್ ಎಂಬಾತ ಸಮವಸ್ತ್ರ ಧರಿಸದೆ ಆಟೋ ಚಲಾಯಿಸಿಕೊಂಡು ಬರುತ್ತಿದ್ದಾಗ ಪುತ್ತೂರು ಸಂಚಾರಿ ಪೊಲೋಸರು ಕೈ ಸನ್ನೆ ಮಾಡಿದರೂ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಬಂದಿದ್ದು ಈ ವೇಳೆ ಆತನನ್ನು ಹಿಂಬಾಲಿಸಿಕೊಂಡು ಬಂದ ಪೊಲಿಸರಿಬ್ಬರು ರಿಕ್ಷಾವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ಮಾಡಿದ್ದು ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ಪರಿಶೀಲಿಸಿ ಎ.ಎಸ್.ಐ ಚಿದಾನಂದ ರೈ ಅವರನ್ನು ಹಾಗೂ ಪಿ.ಸಿ ಶ್ರೀಶೈಲ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.
